ಮುಂಬೈ: ಒಂದು ಕಡೆ 7 ಮಂದಿ ಬ್ಯಾಟ್ಸ್ಮ್ಗಳು ಔಟ್, ಮತ್ತೊಂದು ಕಡೆ ಸ್ನಾಯು ಸೆಳೆತದ ನೋವು, ಇದರ ನಡುವೆಯೂ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತೋರಿಸಿಕೊಟ್ಟರು. ಮಂಗಳವಾರ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.
292 ರನ್ಗಳ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 91 ರನ್ಗಳಿಗೆ ಪ್ರಮುಖ 7 ವಿಕೆಟ್ಗಳನ್ನು ಕಳೆದುಕಂಡು ಸೋಲಿನ ದವಡೆಗೆ ಸಿಲುಕಿತ್ತು. ಈ ವೇಳೆ ಜೊತೆಯಾದ ಪ್ಯಾಟ್ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಜೋಡಿ 8ನೇ ವಿಕೆಟ್ಗೆ 202 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿತು. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು.
ವಿಶೇಷವಾಗಿ ಆಸ್ಟ್ರೇಲಿಯಾದ ಗೆಲುವಿನ ಶ್ರೇಯ ಗ್ಲೆನ್ ಮ್ಯಾಕ್ಸ್ವೆಲ್ಗೆ ಸಿಗಬೇಕು. ಏಕೆಂದರೆ, ಒಂದು ತುದಿಯಲ್ಲಿ ಕಮಿನ್ಸ್ ರಕ್ಷಣಾತ್ಮಕ ಆಟವಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಫೋರ್-ಸಿಕ್ಸರ್ಗಳ ಮೂಲಕ ಹಬ್ಬ ಮಾಡಿದರು. ಇದರ ನಡುವೆ ಅವರು ಸ್ನಾಯು ಸೆಳೆತದ ನೋವಿಗೂ ಒಳಗಾಗಿದ್ದರು. ಎಷ್ಟೇ ನೋವಿದ್ದರೂ ತಂಡವನ್ನು ಗೆಲ್ಲಿಸಬೇಕೆಂದು ಪಣ ತೊಟ್ಟ ಮ್ಯಾಕ್ಸ್ವೆಲ್, ತಮ್ಮ ಕಾಲಿನ ನೋವು ನುಂಗಿಕೊಂಡು ಕುಂಟುತ್ತಾ ಬ್ಯಾಟ್ ಮಾಡಿ ಆಸ್ಟ್ರೇಲಿಯಾವನ್ನು ಗೆಲ್ಲಿಸಿದರು.
“ಗ್ಲೆನ್ ಮ್ಯಾಕ್ಸ್ವೆಲ್ 200 ರನ್ಗಳನ್ನು ಚೆಸ್ ಮಾಡಿದ್ದು, ಒಡಿಐ ಕ್ರಿಕೆಟ್ನಲ್ಲಿ ಇದು ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಆಗಿದೆ. ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಆಡಿದ್ದಾರೆ ಹಾಗೂ ಇವರಿಗೆ ಪ್ಯಾಟ್ ಕಮಿನ್ಸ್ ನೆರವು ನೀಡಿದ್ದಾರೆ. ದೀರ್ಘಾವಧಿ ಈ ಇನಿಂಗ್ಸ್ ಅನ್ನು ನೆನಪಿಸಿಕೊಳ್ಳಲಾಗುತ್ತದೆ,” ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.ಮ್ಯಾಕ್ಸ್ವೆಲ್ ಅವರ ಈ ದ್ವಿಶತಕ ಅಸಾಧರಣವಾಗಿದೆ,” ಎಂದು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಶ್ಲಾಘಿಸಿದ್ದಾರೆ. ಹಾಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.