ಬೆಂಗಳೂರು;-ಬೆಲೆ ಇಲ್ಲದವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪಗೆ ST ಸೋಮಶೇಖರ್ ಟಾಂಗ್ ಕೊಟ್ಟಿದ್ದಾರೆ.
ʻʻನನ್ನನ್ನು ಪಕ್ಷದಿಂದ ಬಿಟ್ಟು ಹೋಗು ಅಂತ ಹೇಳಲು ಈಶ್ವರಪ್ಪ ಯಾರು!? ʻʻನಾನು ಈಶ್ವರಪ್ಪನನ್ನು ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ ಐದು ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲʼʼ ಎಂದು ಮೈಸೂರಿನಲ್ಲಿ ಮಾತನಾಡುತ್ತಾ ಅವರು ಹೇಳಿದರು.
ʻʻಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿದ್ದಲ್ಲ. ಆರ್ ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವೇ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವೇ? ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲವೇ? ಕೇವಲ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂಧರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆʼʼ ಎಂದು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡೆಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆಗೆ ಉತ್ತರಿಸಿದರು.
ʻʻನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ನಾನು ಮಾನಸಿಕವಾಗಿ ದೈಹಿಕವಾಗಿ ನಾನು ಪಕ್ಷದಲ್ಲೆ ಇದ್ದೇನೆʼʼ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ʻʻಕಾಂಗ್ರೆಸ್ ಸೇರುತ್ತಾರೆ ಎಂಬುದ್ದೆಲ್ಲ ಊಹಾಪೋಹಗಳು. ನಾನು ಯಡಿಯೂರಪ್ಪ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ.
ಆದರೆ ಉಳಿದಿವರೇ ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ, ಆದರೆ ಪ್ರಯೋಜನವಾಗಲಿಲ್ಲ. ಅವರ ಹುಟ್ಟಹಬ್ಬವನ್ನೇ ಕ್ಷೇತ್ರದಲ್ಲಿ ಅದ್ದೂರಿಯಾಗಿ ಮಾಡಿದರು. ಇದೆಲ್ಲ ಏನ್ ಅರ್ಥʼʼ ಎಂದು ಸೋಮಶೇಖರ್ ಪ್ರಶ್ನೆ ಮಾಡಿದರು.
ʻʻಬಸವರಾಜು ಬೊಮ್ಮಯಿ ಅವರು ಮುಖ್ಯಮಂತ್ರಿಯಾದಾಗ ನನ್ನನ್ನು ಉಳಿಸಿದ್ದು ಯಡಿಯೂರಪ್ಪ ಅವರು. ಯಡಿಯೂರಪ್ಪ ಅವರ ವಿರುದ್ಧ ಐದಾರು ಜನರು ಮಾತನಾಡಿದರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನೆಡೆಗೆ ಕಾರಣʼʼ ಎಂದು ಹೇಳುವ ಮೂಲಕ ಯಡಿಯೂರಪ್ಪರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದಕ್ಕೆ ಎಸ್.ಟಿ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.