ನವದೆಹಲಿ: ದೇಶಾದ್ಯಂತ ಭಾರತ್ ಅಟ್ಟಾ (Bharat Atta) ಹೆಸರಿನ ಹಿಟ್ಟು ವಿತರಣಾ ವಾಹನಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ದೆಹಲಿಯಲ್ಲಿ ಮೊಬೈಲ್ ವ್ಯಾನ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ದೇಶಾದ್ಯಂತ 2 ಸಾವಿರ ಕಡೆ ಈ ಹಿಟ್ಟು ಲಭ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF), ಸಫಲ್, ಮದರ್ ಡೈರಿ ಮತ್ತು ಇತರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಕೆಜಿಗೆ 27.50 ರೂಪಾಯಿಯಲ್ಲಿ ಗೋಧಿ ಹಿಟ್ಟು ಲಭ್ಯವಾಗಲಿದೆ.
ಈ ಯೋಜನೆಗಾಗಿ 2.5 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು. ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂ.ಇದೆ. ಹಣದುಬ್ಬರ (Inflation) ನಿಯಂತ್ರಿಸಲು ಈ ಪರಿಹಾರ ಕಂಡುಕೊಳ್ಳಲಾಗಿದೆ.
ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಅಲ್ಲದ ಹಿಟ್ಟಿನ ಚಿಲ್ಲರೆ ಬೆಲೆ ಕೆಜಿಗೆ 30-40 ರೂ.ಗಳಾಗಿದ್ದು, ಬ್ರಾಂಡ್ ಹಿಟ್ಟು ಕೆಜಿಗೆ 40-50 ರೂ.ಗೆ ಮಾರಾಟವಾಗುತ್ತಿದೆ. ನಿರಂತರವಾಗಿ ಹೆಚ್ಚುತ್ತಿರುವ ಗೋಧಿ ಬೆಲೆಯಿಂದಾಗಿ ಹಬ್ಬ ಹರಿದಿನಗಳಲ್ಲಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಹಿಟ್ಟು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ನೀಡಲು ಸರ್ಕಾರ ಪ್ರತಿ ಕೆ.ಜಿ.ಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ.
ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಎನ್ಸಿಸಿಎಫ್ ಮತ್ತು ಎನ್ಎಫ್ಇಡಿ ಈಗಾಗಲೇ ಪ್ರತಿ ಕೆಜಿಗೆ 25 ರೂ. ದರದಲ್ಲಿ ಬಫರ್ ಈರುಳ್ಳಿ ಮಾರಾಟ ಮಾಡುತ್ತಿವೆ. NCCF 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ಚಿಲ್ಲರೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. NAFED 21 ರಾಜ್ಯಗಳ 55 ನಗರಗಳಲ್ಲಿ 329 ಚಿಲ್ಲರೆ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಕೇಂದ್ರೀಯ ಭಂಡಾರ್ ಕಳೆದ ಶುಕ್ರವಾರದಿಂದ ದೆಹಲಿ-ಎನ್ಸಿಆರ್ನಲ್ಲಿರುವ ತನ್ನ ಮಳಿಗೆಗಳಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದೆ.