ಟೆಲ್ ಅವೀವ್: ಪ್ಯಾಲೆಸ್ತೇನ್ (Palestine) ಕಾರ್ಮಿಕರ ಬದಲು ಭಾರತದ (India) ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ (Isreal) ಈಗ ಮುಂದಾಗಿದೆ. ಹೌದು. ಹಮಾಸ್ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್ ಕಾರ್ಮಿಕರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗ ಪ್ಯಾಲೆಸ್ತೇನ್ ಪ್ರಜೆಗಳ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ (Construction) ಉದ್ಯಮವು ಸರ್ಕಾರವನ್ನು ಕೇಳಿದೆ ಎಂದು ವರದಿಯಾಗಿದೆ.
ಇದೀಗ ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬೇಡಿಕೆಗೆ ಅನುಮತಿ ನೀಡಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ. ಇಡೀ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಾಗುವಂತೆ ಭಾರತದಿಂದ 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ವೆಸ್ಟ್ ಬ್ಯಾಂಕ್ನ ವಾಯ್ಸ್ ಆಫ್ ಅಮೇರಿಕಾ ವರದಿಯು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ವರದಿಯ ಪ್ರಕಾರ, ಇಸ್ರೇಲಿ ನಿರ್ಮಾಣ ಉದ್ಯಮದಲ್ಲಿ ಉದ್ಯೋಗಿಯಾಗಿರುವ ಕಾರ್ಮಿಕರ ಪೈಕಿ ಪ್ಯಾಲೆಸ್ತೇನಿಯನ್ನರು ಸರಿಸುಮಾರು 25 ಪ್ರತಿಶತವನ್ನು ಹೊಂದಿದ್ದಾರೆ. ನಾವು ಈಗ ಯುದ್ಧದಲ್ಲಿದ್ದೇವೆ. ನಮ್ಮ ಮಾನವ ಸಂಪನ್ಮೂಲದ ಸುಮಾರು 25 ಪ್ರತಿಶತದಷ್ಟು ಇರುವ ಪ್ಯಾಲೆಸ್ತೇನ್ ಕೆಲಸಗಾರರು ಬರುತ್ತಿಲ್ಲ. ಇವರಿಗೆ ಇಸ್ರೇಲ್ನಲ್ಲಿ ಕೆಲಸ ಮಾಡಲು ಅನುಮತಿ ಇಲ್ಲ ಎಂದು ಫೀಗ್ಲಿನ್ ಹೇಳಿದ್ದಾರೆ.