ದೋಹಾ: ಕತಾರ್ ನಲ್ಲಿರುವ ಕರ್ನಾಟಕ ಸಂಘವು 68ನೇ ಕನ್ನಡ ರಾಜ್ಯೋತ್ಸವನ್ನು ನವೆಂಬರ್ 3 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪತ್ರಕರ್ತರಾದ ಜೋಗಿ ಖ್ಯಾತಿಯ ಗಿರೀಶ್ ರಾವ್ ಹತ್ವಾರ್ ಹಾಗೂ ಸ್ಯಾಂಡಲ್ ವುಡ್ನ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗೆಲು, ಐಸಿಬಿಫ್ ನ ಅಧ್ಯಕ್ಷ ಶಾನವಸ್ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು.
ರವಿಚಂದ್ರನ್ (Ravichandran) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಹೇಶ್ ಗೌಡ ಅವರ ಪ್ರೀತಿಯ ಕರೆ ಅವರನ್ನು ಕತಾರ್ಗೆ ಬರುವಂತೆ ಪ್ರೇರೇಪಿಸಿದ್ದು ಹಾಗೂ ಅವರ ಕತಾರ್ ನ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಭೆಗೆ ತಿಳಿಸಿದರು. ಅವರ ತಂದೆಯ ಜೀವನ ಶೈಲಿಯನ್ನು ನೆನೆಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ಪ್ರೇಮಲೋಕ ಚಿತ್ರದ ಭಾಗ-2 ನಿರ್ಮಿಸಿ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಮಹೇಶ್ ಗೌಡ ಅವರು ಕಾರ್ಯಕ್ರಮವನ್ನು ಸ್ವಾಗತಿಸಿ, ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ. ಈ ಸಂಭ್ರಮವನ್ನು ವಿಜ್ರಂಭಣೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ ಭಾರತೀಯ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ಧನ್ಯವಾದಗಳನ್ನು ತಿಳಿಸಿ ಅವರಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.