ನವದೆಹಲಿ: ಶಕೀಬ್ ಅಲ್ ಹಸನ್ (Shakib Al Hasan) ಮತ್ತು ಬಾಂಗ್ಲಾದೇಶ ತಂಡ ಮಾಡಿದ್ದು ನಿಜಕ್ಕೂ ಅವಮಾನಕರ ಕೃತ್ಯ. ಅವರು ಕ್ರಿಕೆಟ್ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಏಂಜಲೋ ಮಾಥ್ಯೂಸ್ (Angelo Mathews) ಕಿಡಿ ಕಾರಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಸೋಲನುಭವಿಸಿದ ನಂತರ ಪೋಸ್ಟ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಕೀಬ್ ಅಲ್ ಹಸನ್ ಮಾಡಿದ್ದು, ನಿಜಕ್ಕೂ ಅವಮಾನಕರ ಕೃತ್ಯ. ಅವರ ಸಾಮಾನ್ಯ ಜ್ಞಾನ ಎಲ್ಲಿ ಹೋಯ್ತು ಅನ್ನೋದು ನನಗೆ ಗೊತ್ತಾಗಲಿಲ್ಲ. ಅವರು ಕ್ರಿಕೆಟ್ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಜಾಡಿಸಿದ್ದಾರೆ.
ಯಾವುದೇ ಒಬ್ಬ ಆಟಗಾರ ಔಟಾದ ಬಳಿಕ ಮುಂದಿನ ಆಟಗಾರ 2 ನಿಮಿಷದ ಒಳಗೆ ಕ್ರೀಸ್ನಲ್ಲಿ ಇರಬೇಕು ಏಂದು ಐಸಿಸಿ ನಿಯಮ ಹೇಳುತ್ತದೆ. ನಾನೂ ಕೂಡ 2 ನಿಮಿಷದಲ್ಲೇ ಕ್ರೀಸ್ನಲ್ಲಿ ಇದ್ದೆ. ಆದ್ರೆ ನನ್ನ ಹೆಲ್ಮೆಟ್ ಒಡೆದಿತ್ತು. ಬದಲಿ ಹೆಲ್ಮೆಟ್ ಪಡೆದ ನಂತರವೂ ಇನ್ನೂ 5ಕ್ಕೂ ಹೆಚ್ಚು ಸೆಕೆಂಡುಗಳನ್ನು ಹೊಂದಿದ್ದೆ. ಆದರೂ ಔಟ್ ನೀಡಿದ್ದು ಅಮಾನವೀಯ ಎಂದು ಕಿಡಿಕಾರಿದರಲ್ಲದೇ ನಾನು ಶಕೀಬ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಆದ್ರೆ ಇಂತಹ ಘಟನೆಯ ನಂತರ ಅವರ ಮೇಲೆ ನನಗಿದ್ದ ಮನಸ್ಥಿತಿ ಬದಲಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಏನಿದು ವಿವಾದ..?
ಬಾಂಗ್ಲಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 24.2ನೇ ಓವರ್ನಲ್ಲಿ 135 ರನ್ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೋ ಮಾಥ್ಯೂಸ್ ಕ್ರೀಸ್ಗೆ ಬಂದರು. ಆದ್ರೆ ಬಾಲ್ ಎದುರಿಸಲು ಮುಂದಾದಾಗ ಹೆಲ್ಮೆಟ್ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪೈರ್ ಜೊತೆ ಬ್ಯಾಟರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್ ಔಟ್ಗೆ (Timed Out) ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್ ಅವರು, ನನ್ನ ಹೆಲ್ಮೆಟ್ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದೇನೆ ಎಂದು ಅಂಪೈರ್ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್ ಮಾತ್ರ ತಮ್ಮ ಟೈಮ್ಡ್ ಔಟ್ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್ ಎಸೆದು ಸಿಟ್ಟು ಹೊರಹಾಕಿದರು.
ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೇ ಫೀಲ್ಡಿಂಗ್ ನಡೆಸುವ ತಂಡದ ನಾಯಕ ಟೈಮ್ಡ್ ಔಟ್ಗೆ ಮನವಿ ಮಾಡಬಹುದು. ಅಂಪೈರ್ ನೇರವಾಗಿ ಔಟ್ ನೀಡಲು ಬರುವುದಿಲ್ಲ. ಬೌಲಿಂಗ್ ನಡೆಸುವ ತಂಡದ ನಾಯಕ ಮನವಿ ಮಾಡಿದ್ರೆ ಮಾತ್ರ ಟೈಮ್ಡ್ ಔಟ್ ನೀಡಬಹುದು. ಬ್ಯಾಟರ್ ಟೈಮ್ಡ್ ಔಟಾದರೆ ಬೌಲರ್ಗೆ ವಿಕೆಟ್ ಸಿಗುವುದಿಲ್ಲ