ವಾಷಿಂಗ್ಟನ್ ಡಿಸಿ: ಬಿಲಿಯನೇರ್ ಡೆಮೋಕ್ರಾಟ್ ದಾನಿ ಜಾರ್ಜ್ ಸೊರೋಸ್ ವಿರುದ್ಧ ಎಕ್ಸ್ ಮಾಲೀಕ ಹಾಗೂ ಸ್ಪೇಸ್ ಎಕ್ಸ್, ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಕಿಡಿ ಕಾರಿದ್ದಾರೆ. ಜೋ ರೋಗನ್ ಅವರೊಂದಿಗಿನ ಇತ್ತೀಚಿನ ಪಾಡ್ಕ್ಯಾಸ್ಟ್ ಸಂಚಿಕೆಯಲ್ಲಿ ಮಾತನಾಡಿದ ಎಲಾನ್ ಮಸ್ಕ್ ಸೊರೋಸ್ ವಿರುದ್ಧ ಟೀಕೆ ಮಾಡಿದ್ದಾರೆ. ಜಾರ್ಜ್ ಸೊರೋಸ್ “ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ” ಎಂದು ಎಲಾನ್ ಮಸ್ಕ್ ಟೀಕಿಸಿದ್ದಾರೆ. ಹಾಗೂ ಸೊರೋಸ್ನ ಕ್ರಮಗಳ ಬಗ್ಗೆ ಎಲಾನ್ ಮಸ್ಕ್ ತನ್ನ ಕಳವಳ ವ್ಯಕ್ತಪಡಿಸಿದ್ದು,
ಇದರಿಂದ ನಾಗರಿಕತೆಯ ಅಡಿಪಾಯವನ್ನು ನಾಶಪಡಿಸುತ್ತಿದೆ ಎಂದು ನಂಬಿರುವುದಾಗಿಯೂ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ. ಇನ್ನೊಂದೆಡೆ, ಅಪರಾಧಗಳನ್ನು ವಿಚಾರಣೆ ಮಾಡಲು ನಿರಾಕರಿಸುವ ಜಿಲ್ಲಾ ವಕೀಲರನ್ನು (District Attorneys) (ಡಿಎ) ಆಯ್ಕೆ ಮಾಡುವ ವಿಷಯವನ್ನು ಎಲಾನ್ ಮಸ್ಕ್ ಪ್ರಸ್ತಾಪಿಸಿದ್ದು, ಇದು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್ನಂತಹ ನಗರಗಳ ಮೇಲೆ ಪರಿಣಾಮ ಬೀರುವ ಸಮಸ್ಯೆ ಎಂದು ಅವರು ನೋಡುತ್ತಾರೆ.
ಇನ್ನು, ಈ ಆತಂಕಗಳು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಎಲಾನ್ ಮಸ್ಕ್ ಅವರನ್ನು ಪ್ರಶ್ನೆ ಮಾಡಿದ್ದು, ಅದಕ್ಕೆ ಅವರು ಜಾರ್ಜ್ ಸೊರೋಸ್ ಇತರ ದೇಶಗಳಲ್ಲಿ ಸಹ ಇದೇ ರೀತಿಯ ಬದಲಾವಣೆಗಳನ್ನು ಪ್ರಭಾವಿಸುತ್ತಿದ್ದಾರೆ ಎಂದು ಅವರು ಸೂಚಿಸಿದ್ದಾರೆ. “ನನ್ನ ಅಭಿಪ್ರಾಯದಲ್ಲಿ, ಅವರು (ಸೊರೋಸ್) ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ.. ಅವರು ನಾಗರಿಕತೆಯ ಚೌಕಟ್ಟನ್ನೇ ನಾಶಮಾಡುವ ಕೆಲಸ ಮಾಡುತ್ತಿದ್ದಾರೆ’’ ಎಂದೂ ಎಲಾನ್ ಮಸ್ಕ್ ಆರೋಪಿಸಿದರು.