ಮಾಲ್ಡೀವ್ಸ್: ಮಾಲ್ಡೀವ್ಸ್ ದೇಶವು ತನ್ನ ದೇಶದಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ-ಚುನಾಯಿತ ಮೊಹಮ್ಮದ್ ಮುಯಿಝು ಬ್ಲೂಮ್ಬರ್ಗ್ ನ್ಯೂಸ್ ಪ್ರಕಟಿಸಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತ ಹಾಗೂ ಚೀನಾ ಎರಡೂ ದೇಶಗಳು ಈ ದೇಶದಲ್ಲಿ ತನ್ನ ಪ್ರಭಾವವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರನ್ನು ಅಧ್ಯಕ್ಷ ಸ್ಥಾನದ ಚುನಾವಣೆಲ್ಲಿ ಸೋಲಿಸಿದ ಬಳಿಕ ತಮ್ಮ ಚುನಾವಣೆ ಭರವಸೆಗಳಲ್ಲಿ ಪ್ರಮುಖವಾಗಿ ಘೋಷಣೆ ಮಾಡಲಾದ ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಹಾಗೇನಾದರೂ ತಾವು ಅಧ್ಯಕ್ಷರಾದಲ್ಲಿ ಭಾರತದ ಸೇನಾಪಡೆಗಳನ್ನು ಮಾಲ್ಡೀವ್ಸ್ನಿಂದ ಹೊರಹಾಕುವುದಾಗಿ ಅವರು ಭರವಸೆ ನೀಡಿದ್ದರು. ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ಭಾರತ ಸರ್ಕಾರದ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ.
ಮುಯಿಝು ಸಂದರ್ಶನದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ಗಳನ್ನುಈಗಾಗಲೇ ಪ್ರಾರಂಭ ಮಾಡಿದ್ದೇವೆ ಹಾಗೂ ಈ ಮಾತುಕತೆಗಳು “ಈಗಾಗಲೇ ಬಹಳ ಯಶಸ್ವಿಯಾಗಿದೆ” ಎಂದು ಮಾಹಿತಿ ನೀಡಿದ್ದಾರೆ. “ನಾವು ಪರಸ್ಪರ ಪ್ರಯೋಜನಕಾರಿಯಾದ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತೇವೆ” ಎಂದು ಮುಯಿಝು ಬ್ಲೂಮ್ಬರ್ಗ್ಗೆ ತಿಳಿಸಿದರು, ಭಾರತೀಯ ಸೈನಿಕರ ಬದಲು ಬೇರೆ ಯಾವುದೇ ದೇಶದ ಸೈನಿಕರನ್ನು ಈ ಪ್ರದೇಶಕ್ಕೆ ನಿಯೋಜನೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಚೀನಾದ ಸೈನಿಕರ ನೆರವನ್ನೂ ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಸರ್ಕಾರಕ್ಕೆ ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕಿ ಎನ್ನುವುದರ ಅರ್ಥ ನಾನು ಚೀನಾದ ಪರವಾಗಿ ನಿಂತಿದ್ದೇನೆ ಎಂದರ್ಥವಲ್ಲ. ಯಾವುದೇ ದೇಶದ ಸೇನಾಪಡೆಗಳು ಈ ಭಾಗದಲ್ಲಿ ಬರುವಂತಿಲ್ಲ ಎನ್ನುವುದಷ್ಟೇ ಎಂದು ಮುಯಿಝು ಹೇಳಿದ್ದಾರೆ. ಮುಯಿಝುನ ಗೆಲುವು ಹಿಂದೂ ಮಹಾಸಾಗರದ ಮೇಲಿನ ಪ್ರಭಾವಕ್ಕಾಗಿ ಚೀನಾ ಮತ್ತು ಭಾರತದ ನಡುವಿನ ಹಗ್ಗ-ಜಗ್ಗಾಟವನ್ನು ಇನ್ನಷ್ಟು ವಿಸ್ತರಿಸಿದೆ.