ಬೆಂಗಳೂರು: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದಿಂದ ನ್ಯೂಜಿಲೆಂಡ್ (New Zealand) ತಂಡವು ಶ್ರೀಲಂಕಾ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ, ಸೆಮಿಫೈನಲ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ಆದ್ರೆ ಪಾಕಿಸ್ತಾನ (Pakistan) ತಂಡಕ್ಕೆ ಇದು ನುಂಗಲಾರದ ತುತ್ತಾಗಿದೆ.
ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ 275+ ರನ್ಗಳ ಅಂತರದಿಂದ ಇಂಗ್ಲೆಂಡ್ (England) ತಂಡವನ್ನು ಸೋಲಿಸಬೇಕಿದೆ. ಅಥವಾ 2.3 ಓವರ್ಗಳಲ್ಲಿ ಇಂಗ್ಲೆಂಡ್ ಟಾರ್ಗೆಟ್ ಅನ್ನು ಚೇಸ್ ಮಾಡಬೇಕಿದೆ ಎಂದು ಕ್ರಿಕೆಟ್ ತಜ್ಞರು ಅಂದಾಜಿಸಿದ್ದಾರೆ. ಆದ್ರೆ ಇಂಗ್ಲೆಂಡ್ ತಂಡವನ್ನು ಅಷ್ಟು ಸುಲಭದಲ್ಲಿ ಸೋಲಿಸುವುದು ಪಾಕ್ಗೆ ಅಸಾಧ್ಯವಾಗಿದ್ದು, ಬಹುತೇಕ ಸೆಮಿ ಫೈನಲ್ ಕನಸು ಭಗ್ನ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕಿವೀಸ್, ಬ್ಯಾಟಿಂಗ್ ಮಾಡುವ ಅವಕಾಶವನ್ನು ಶ್ರೀಲಂಕಾಗೆ (Sri Lanka) ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 171 ರನ್ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಕಿವೀಸ್ 23.2 ಓವರ್ಗಳಲ್ಲೇ 172 ರನ್ ಗಳಿಸಿ ಸೆಮಿಫೈನಲ್ ಹಾದಿಯನ್ನು ಸುಲಭವಾಗಿಸಿಕೊಂಡಿತು. ಇನ್ನೂ 2023ರ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಕೊನೆಯ ಲೀಗ್ ಪಂದ್ಯವನ್ನಾಡಿದ ಶ್ರೀಲಂಕಾ ಸೋಲಿನೊಂದಿಗೆ ವಿದಾಯ ಹೇಳಿತು.