ಕ್ಯಾನ್ಬೆರಾ: ಆಸ್ಟ್ರೇಲಿಯಾಕ್ಕೆ (Australia) ಬರೋಬ್ಬರಿ 7 ವಿಶ್ವಕಪ್ (World Cup) ಟ್ರೋಫಿಗಳನ್ನು ಗೆದ್ದುಕೊಟ್ಟ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಅಂತಾರಾಷ್ಟ್ರೀಯ ಕ್ರಿಕೆಟ್ಗೆ (International Cricket) ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಕ್ರಿಕೆಟ್ ಜೀವನದಲ್ಲಿ ದಾಖಲೆಯ 241 ಪಂದ್ಯಗಳನ್ನಾಡಿರುವ ಅವರು, ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಒಟ್ಟು ಆರು ಟೆಸ್ಟ್ ಪಂದ್ಯಗಳು, 103 ಏಕದಿನ ಪಂದ್ಯಗಳು ಮತ್ತು 132 ಟಿ20 ಪಂದ್ಯಗಳನ್ನು ಆಡಿರುವ ಲ್ಯಾನಿಂಗ್, ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ದೇಶದ ಒಳಗೆ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಭಾರತದಲ್ಲಿ ನಡೆಯಲಿರುವ ಡಬ್ಲ್ಯೂಪಿಎಲ್ ಟೂರ್ನಿಯಲ್ಲೂ ಬಹುತೇಕ ಆಡಲಿದ್ದಾರೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗೆ ಹೋಗುವ ನಿರ್ಧಾರ ಕೈಗೊಳ್ಳುವಾಗ ಕಷ್ಟಕರವಾಗಿತ್ತು. 13 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆನಂದಿಸಿರುವ ನಾನು ನಿಜಕ್ಕೂ ಅದೃಷ್ಟಶಾಲಿಯಾಗಿದ್ದೇನೆ. ನಿವೃತ್ತಿಗೆ ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಒಟ್ಟು ಎರಡು ಏಕದಿನ ವಿಶ್ವಕಪ್ ಮತ್ತು ಐದು ಟಿ20 ವಿಶ್ವಕಪ್ಗಳನ್ನು ಗೆದ್ದಿರುವ ಲ್ಯಾನಿಂಗ್, ಮಹಿಳೆಯರ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕಿಯಾಗಿದ್ದಾರೆ. 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು, ಈವರೆಗೆ ತಮ್ಮ ಖಾತೆಯಲ್ಲಿ ಒಟ್ಟು 8,352 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 38 ಅರ್ಧ ಶತಕಗಳು ಸೇರಿವೆ.