ವಾಷಿಂಗ್ಟನ್: ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಪ್ರಗತಿಯ ಅತ್ಯುತ್ತಮ ನಾಯಕ ಎಂದು ಅಮೆರಿಕ ಗಾಯಕ ಮತ್ತು ಆಫ್ರಿಕನ್-ಅಮೇರಿಕನ್ ನಟಿ ಮೇರಿ ಮಿಲ್ಬೆನ್ (Mary Millben) ಬಣ್ಣಿಸಿದ್ದಾರೆ. ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ವಿವಾದಾತ್ಮಕ ಜನಸಂಖ್ಯಾ ನಿಯಂತ್ರಣ ಹೇಳಿಕೆ ನೀಡಿದ್ದು, ವ್ಯಾಪಕ ಚರ್ಚೆ ಹುಟ್ಟುಕೊಂಡಿದೆ. ಮಹಿಳೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ತೀವ್ರವಾಗಿ ಟೀಕಿಸಲಾಗಿತ್ತು.
ತಮ್ಮ ಹೇಳಿಗೆ ನಿತೀಶ್ ಕುಮಾರ್ ಕ್ಷಮೆ ಕೇಳಿದ್ದಾರೆ. ಬಿಹಾರ ಸಿಎಂ ಹೇಳಿಕೆಗೆ ಅಮೆರಿಕ ಗಾಯಕಿ ವೀಡಿಯೋ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಧೈರ್ಯಶಾಲಿ ಮಹಿಳೆ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಉಮೇದುವಾರಿಕೆ ಘೋಷಿಸುವ ಸಮಯ ಬಂದಿದೆ ಎಂದು ಮೇರಿ ಮಿಲ್ಬೆನ್ ಆಶಯ ವ್ಯಕ್ತಪಡಿಸಿದ್ದಾರೆ.
ಇಂದು, ಭಾರತವು ಬಿಹಾರದಲ್ಲಿ ನಿರ್ಣಾಯಕ ಕ್ಷಣವನ್ನು ಎದುರಿಸುತ್ತಿದೆ. ಅಲ್ಲಿ ಮಹಿಳೆಯರ ಮೌಲ್ಯಕ್ಕೆ ಸವಾಲು ಎದುರಾಗಿದೆ. ಈ ಸವಾಲಿಗೆ ಒಂದೇ ಒಂದು ಉತ್ತರವಿದೆ ಎಂದು ನಾನು ಭಾವಿಸಿದ್ದೇನೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಗಳ ನಂತರ, ಧೈರ್ಯಶಾಲಿ ಮಹಿಳೆ ಒಂದು ಹೆಜ್ಜೆ ಮುಂದೆ ಬರುವ ಅಗತ್ಯವಿದೆ. ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸಲು ತನ್ನ ಉಮೇದುವಾರಿಕೆ ಘೋಷಿಸಿ. ನಾನು ಭಾರತದ ಪ್ರಜೆಯಾಗಿದ್ದರೆ, ಬಿಹಾರಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತೇನೆ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.