ಮಖಾನ ಎಂದು ಕರೆಯಲ್ಪಡುವ ಲೋಟಸ್ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದು ಯಾವುದೋ ಹೊಸ ಹೆಸರು ಎಂದು ತಿಳಿದು ಕೊಳ್ಳುವವರಿಗೆ ತಾವರೆ ಬೀಜಗಳು ಎಂದು ಸುಲಭವಾಗಿ ಹೇಳಬಹುದು. ತಮ್ಮಲ್ಲಿನ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಮನುಷ್ಯರಿಗೆ ಒದಗಿಸುವ ಕೆಲಸ ಮಖಾನ ಬೀಜಗಳದ್ದು. ಚೀನಾ ದೇಶದಲ್ಲಿ ಇವುಗಳನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗ ಮಾಡುತ್ತಾರೆ.
ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು. ಇನ್ನು ಡ್ರೈ ಫ್ರೂಟ್ ಗಳಾದ ಬಾದಾಮಿ ಬೀಜಗಳು, ವಾಲ್ನಟ್, ಗೋಡಂಬಿ ಬೀಜಗಳೂ ಕೂಡ ಫಾಕ್ಸ್ ಸೀಡ್ಸ್ ಗೆ ಹೋಲಿಸಿದರೆ, ಪೌಷ್ಟಿಕ ಸತ್ವಗಳಲ್ಲಿ ತಳಹದಿಯಲ್ಲಿ ನಿಂತಿರುತ್ತವೆ. ಫಾಕ್ಸ್ ಸೀಡ್ಸ್ ಗಳ ಸೇವನೆ ವಿಷಯಕ್ಕೆ ಬಂದರೆ ಇವುಗಳ ಮೇಲೆ ಕೆಲವು ಮಸಾಲೆ ಪದಾರ್ಥಗಳನ್ನು ಸಿಂಪಡಿಸಿ ಹುರಿದು ತಿನ್ನಬಹುದು. ಇವು ನಾಲಿಗೆಗೆ ಬಹಳ ರುಚಿ ಕೊಡುತ್ತವೆ. ಫಾಕ್ಸ್ ಸೀಡ್ಸ್ ಗಳ ಹಲವಾರು ಆರೋಗ್ಯ ಪ್ರಯೋಜನಗಳು ಈ ರೀತಿ ಇವೆ
ಡಯಟ್ ಮಾಡುವವರಿಗೆ ಸಹಕಾರಿ
ಮಖಾನ ಬೀಜಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ. ಡಯಟ್ ಮಾಡಿ ದೇಹದ ತೂಕ ಕರಗಿಸಿಕೊಳ್ಳುವ ವ್ಯಕ್ತಿಗಳಿಗೆ ಉಪವಾಸದ ಸಮಯದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ. ಬಿಡಿಸಿ ಹೇಳಬೇಕೆಂದರೆ ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಿಲ್ಲದೆ ಸುಲಭವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಒಂದು ಬಟ್ಟಲು ಮಖಾನ ಬೀಜಗಳನ್ನು ಸೇವಿಸಿದರೂ ಸಹ ನಿಮ್ಮ ಕ್ಯಾಲರಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಂದರೆ ಮಖಾನ ಬೀಜಗಳು ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರುತ್ತವೆ.
ಇನ್ನೂ ಯುವಕರಂತೆ ಕಾಣಬಹುದು
ಮಖಾನ ಬೀಜಗಳಲ್ಲಿ ಆಂಟಿ – ಏಜಿಂಗ್ ಗುಣ ಲಕ್ಷಣಗಳಿಂದ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳನ್ನು ಒಳಗೊಂಡಿವೆ. ಪ್ರತಿ ದಿನ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ನಿಮ್ಮ ದೇಹದ ಚರ್ಮದ ಹೊಳಪು ಹೆಚ್ಚುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಖಾನ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬಾರದು.
ಪಚನಕ್ಕೆ ಅನುಕೂಲ
ತುಪ್ಪದಲ್ಲಿರುವ ಬಟೈರಿಕ್ ಆಮ್ಲವು ಜೀರ್ಣಕ್ರಿಯೆಗೆ ಸಹಕಾರಿ. ಹಾಗಾಗಿ ಹೆಚ್ಚು ನಾರುಭರಿತವಾದ ಮಖನಾಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ, ಪಚನಕ್ರಿಯೆ ಕಡಿಮೆಯಿರುವವರಿಗೆ ಅನುಕೂಲಕರ. ಅವರಿಗಷ್ಟೇ ಅಲ್ಲ, ನಾರುಭರಿತ ಆಹಾರ ಬಹಳಷ್ಟು ಮಂದಿಗೆ ಹೊಟ್ಟೆಯ ತೊಂದರೆಗಳನ್ನು ಕೊಡುತ್ತದೆ. ಅಂಥ ಎಲ್ಲರಿಗೂ ಇದು ಉಪಯುಕ್ತ.
ಹಸಿವು ತಣಿಸುತ್ತದೆ
ಉಪವಾಸ ವ್ರತಗಳನ್ನು ಮಾಡುವಂಥ ಬಹಳಷ್ಟು ಮಂದಿ ನಡುವೆ ಮಖನಾ ತಿನ್ನುವ ಕ್ರಮ ಇರಿಸಿಕೊಂಡಿರುತ್ತಾರೆ. ತೂಕ ಇಳಿಸುವವರಿಗೂ ಇದು ಅಚ್ಚುಮೆಚ್ಚು. ಕಾರಣ, ನಾರು ಮತ್ತು ಪ್ರೊಟೀನ್ ಹೆಚ್ಚಿರುವ ಇದರಲ್ಲಿ ಕ್ಯಾಲರಿ ಕಡಿಮೆ. ತುಪ್ಪದಲ್ಲಿ ಹುರಿದು ಗರಿಯಾಗಿಸಿಕೊಂಡು ಬಾಯಿಗೆಸೆದರೆ ರುಚಿಯಾದ ತಿನಿಸೊಂದನ್ನು ತಿಂದ ತೃಪ್ತಿಯೂ ಉಳಿಯುತ್ತದೆ. ಹೆಚ್ಚು ಕ್ಯಾಲರಿಯನ್ನು ದೇಹಕ್ಕೆ ಸೇರಿಸುವ ಭೀತಿಯೂ ಕಾಡುವುದಿಲ್ಲ.
ಶಕ್ತಿವರ್ಧಕ
ಸರಳ ಕಾರ್ಬ್ಗಳಂತೆ ಥಟ್ಟನೆ ಉರಿದು ಖರ್ಚಾಗುವಂಥ ಸತ್ವಗಳಲ್ಲ ಮಖನಾದಲ್ಲಿರುವುದು. ಇದರಲ್ಲಿರುವ ಪೋಷಕಾಂಶಗಳು ದೀರ್ಘಕಾಲದವರೆಗೆ ದೇಹಕ್ಕೆ ಶಕ್ತಿ ನೀಡುತ್ತಿರುತ್ತವೆ. ಇದರಿಂದ ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ತಡೆದು, ದೇಹವನ್ನೂ ಬಳಲದಂತೆ ರಕ್ಷಿಸಿಕೊಳ್ಳಬಹುದು.
ಮಧುಮೇಹಿಗಳಿಗೆ ಸಹಕಾರಿ
ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಒಳ್ಳೆಯ ಆಹಾರ ಎನಿಸಿವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಬ್ಬಿನ ಅಂಶಗಳು ಹೇರಳವಾಗಿದ್ದು, ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳಷ್ಟು ಕಡಿಮೆ ಇವೆ. ಇದೊಂದೇ ಕಾರಣದಿಂದ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡಬಲ್ಲ ಶಕ್ತಿಯನ್ನು ಮಖಾನ ಬೀಜಗಳು ಪಡೆದಿವೆ ಎಂದು ಯಾರು ಬೇಕಾದರೂ ಹೇಳಬಹುದು.
ರಕ್ತದ ಒತ್ತಡ ಹೊಂದಿರುವವರ ಸ್ನೇಹಿತ
ಮಖಾನ ಬೀಜಗಳಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಅಂಶ ಹೆಚ್ಚಿದ್ದು ಸೋಡಿಯಂ ಅಂಶ ಕಡಿಮೆ ಇದೆ. ಇದು ದೇಹದ ತೂಕದ ಮೇಲೆ ಗಮನ ಇಟ್ಟು ಡಯಟ್ ಮಾಡುತ್ತಿರುವ ಮಂದಿಗೆ ಬಹಳಷ್ಟು ಸಹಾಯಕ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕ ರಕ್ತದ ಒತ್ತಡ ಹೊಂದಿರುವ ಜನರಿಗೆ ಮಖಾನ ಬೀಜಗಳು ಹೇಳಿ ಮಾಡಿಸಿದ ಆಹಾರಗಳಾಗಿವೆ.
ಏಕೆಂದರೆ ಇವುಗಳಲ್ಲಿ ಹೆಚ್ಚಿನ ಪೊಟ್ಯಾಶಿಯಂ ಅಂಶ ಮತ್ತು ಕಡಿಮೆ ಸೋಡಿಯಂ ಅಂಶ ಇರುವುದರಿಂದ ರಕ್ತದ ಒತ್ತಡದಲ್ಲಿ ಯಾವುದೇ ಬಗೆಯ ಹೆಚ್ಚು ಕಡಿಮೆ ಆಗದೇ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಇನ್ನು ಮುಂದೆ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಮಖಾನ ಬೀಜಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಉರಿಯೂತಕ್ಕೆ ಮನೆ ಮದ್ದು
ಮಖಾನ ಬೀಜಗಳಲ್ಲಿ ಕೇಂಫರೊಲ್ ಎಂಬ ಅಂಶವಿದ್ದು ಇದು ಉರಿಯೂತವನ್ನು ಉಪಶಮನ ಮಾಡುತ್ತದೆ. ಸಾಮಾನ್ಯವಾಗಿ ಈಗಿನ ಸಮಯದಲ್ಲಿ ಮಧುಮೇಹ ಆರ್ಥ್ರೈಟಿಸ್ ಮತ್ತು ರ್ಯುಮ್ಯಾಟಿಸ್ಮ್ ಆರೋಗ್ಯ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣವೇ ಉರಿಯೂತ ಎಂದು ಹೇಳಲಾಗುತ್ತದೆ. ಮಖಾನ ಬೀಜಗಳು ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳನ್ನು ಸಹ ಹೊಂದಿವೆ. ಇದರಿಂದ ಹಲವಾರು ಬ್ಯಾಕ್ಟೀರಿಯಾ ಸಂಬಂಧಿತ ಸಮಸ್ಯೆಗಳು ದೂರಾಗುತ್ತವೆ.