ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ (Sri Lanka Cricket) ಮತ್ತೊಂದು ಆಘಾತವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Board) ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶ್ರೀಲಂಕಾ ಸರ್ಕಾರ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ
ಐಸಿಸಿ ಮಂಡಳಿಯು ಇಂದು ಸಭೆ ನಡೆಸಿತು. ಜೊತೆಗೆ ಶ್ರೀಲಂಕಾ ಕ್ರಿಕೆಟ್ ಸದಸ್ಯರಾಗಿ ಅದರ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿದೆ. ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಮತ್ತು/ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ. ನವೆಂಬರ್ 21 ರಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಸಭೆಯ ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ