ರಿಯಾಧ್: ” ಗಾಜಾ ನಗರದಲ್ಲಿ ಇಸ್ರೇಲ್ ಸೇನೆಯು ಆತ್ಮರಕ್ಷಣೆ ನೆಪದಲ್ಲಿ ನಡೆಸುತ್ತಿರುವ ಪ್ಯಾಲೆಸ್ತೀನಿ ನಾಗರಿಕರ ಹತ್ಯಾಕಾಂಡವನ್ನು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ತೀವ್ರವಾಗಿ ಖಂಡಿಸಬೇಕು. ಈ ಕೂಡಲೇ ಇಸ್ರೇಲ್ ಸೇನೆಗೆ ಉಗ್ರ ಸಂಘಟನೆಯ ಪಟ್ಟ ಕಟ್ಟಬೇಕು ,” ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕರೆ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರ ಶೃಂಗದಲ್ಲಿ ಅವರು ಈ ನಿರ್ಣಯವನ್ನು ಮಂಡಿಸಿದ್ದಾರೆ. ಈ ಶೃಂಗವನ್ನು ತುರ್ತಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಮತ್ತು ಅರಬ್ ಲೀಗ್ ಆಯೋಜಿಸಿದ್ದವು.
” ಅಮೆರಿಕದ ಕುಮ್ಮಕ್ಕಿನಿಂದ ಇಸ್ರೇಲ್ ಸಮರವನ್ನು ಮುಂದುವರಿಸಿದೆ. ಪ್ಯಾಲೆಸ್ತೀನಿಯರ ವಿರುದ್ಧದ ನಿಜವಾದ ಅಪರಾಧಿ ಅಮೆರಿಕ,” ಎಂದು ರೈಸಿ ಗುಡುಗಿದ್ದಾರೆ. ರೈಸಿ ಕರೆಗೆ ಬೆಂಬಲ ವ್ಯಕ್ತಪಡಿಸಿರುವ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ” ಪ್ಯಾಲೆಸ್ತೀನಿ ಜನರ ವಿರುದ್ಧದ ಅಪರಾಧಗಳಿಗೆ ನೇರವಾಗಿ ಇಸ್ರೇಲಿ ಅಧಿಕಾರಿಗಳೇ ಹೊಣೆ. ಅವರನ್ನೇ ಹೊಣೆಯಾಗಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಮ ಜರುಗಿಸಬೇಕು. ಕದನವಿರಾಮದಿಂದ ಮಾತ್ರವೇ ಮಧ್ಯಪ್ರಾಚ್ಯದಲ್ಲಿ ಶಾಂತಿ , ಸುಸ್ಥಿರತೆ ಸ್ಥಾಪನೆ ಸಾಧ್ಯ,” ಎಂದು ಪರೋಕ್ಷವಾಗಿ ಇಸ್ರೇಲ್ ಪ್ರಧಾನಿಗೆ ಕದನವಿರಾಮಕ್ಕೆ ಒತ್ತಾಯಿಸಿದ್ದಾರೆ.
ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯ ಖಂಡನೆ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಇಸ್ರೇಲ್ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಳ್ಳಲು ಆಲೋಚನೆ ನಡೆಸಿದೆ ಎಂದು ವರದಿಯಾಗಿದೆ. ತನ್ನ ಸ್ವ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದರ ಜತೆಗೆ ಇಸ್ರೇಲ್ ನಡೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದು ಅದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.