ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ನಾಲ್ಕು ವರ್ಷಗಳ ಹಿಂದೆ ತಮ್ಮ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು, ಅವರು ನಿಧನರಾಗಿ 9 ತಿಂಗಳ ಬಳಿಕ ವಿಚಾರಣೆ ನಡೆಸಲು ಅಲ್ಲಿನ ಸುಪ್ರೀಂಕೋರ್ಟ್ ನಿರ್ಧರಿಸಿದೆ. 2019ರ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ವರ್ಷದ ಫೆಬ್ರವರಿ 5ರಂದು ನಿಧನರಾದ ಮುಷರಫ್ ಅವರು ನಾಲ್ಕು ವರ್ಷಗಳ ಹಿಂದೆಯೇ ಗಲ್ಲು ಶಿಕ್ಷೆ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು.
“ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ ನಾಲ್ವರು ಸದಸ್ಯರ ವಿಸ್ತೃತ ಪೀಠವು, ಈ ಹಿಂದೆ ಪ್ರರ್ವೇಜ್ ಮುಷರಫ್ ಅವರ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ” ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪರ್ವೇಜ್ ಮುಷರಫ್ ಅವರ ಅರ್ಜಿ ವಿಚಾರಣೆ ನಿರರ್ಥಕ ಎಂಬ ಲಾಹೋರ್ ಹೈಕೋರ್ಟ್ ತೀರ್ಪಿನ ವಿರುದ್ಧ ವಿಭಿನ್ನ ಬಾರ್ಗಳು ಮತ್ತು ವಕೀಲರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಪೀಠ ಪರಿಗಣಿಸಿದೆ. ಮೂವರು ಸದಸ್ಯರ ವಿಶೇಷ ನ್ಯಾಯಾಲಯವು 2019ರ ಡಿಸೆಂಬರ್ 17ರಂದು 2-1ರ ಭಿನ್ನ ತೀರ್ಪು ಪ್ರಕಟಿಸಿತ್ತು. ಮುಷರಫ್ ಅವರು ಸಂವಿಧಾನದ 6ನೇ ವಿಧಿಯ ಅಡಿ ದೇಶದ್ರೋಹ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಿದ್ದ ನ್ಯಾಯಪೀಠ, ಅವರ ಗೈರು ಹಾಜರಿಯಲ್ಲಿ ಮರಣ ದಂಡನೆ ವಿಧಿಸಿತ್ತು.