ಮುಂಬೈ: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮಾರಕ ದಾಳಿ ಮುಂದುವರಿಸಿರುವ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ (ನವೆಂಬರ್ 15) ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 57ಕ್ಕೆ7 ವಿಕೆಟ್ ಪಡೆದು ರೋಹಿತ್ ಶರ್ಮಾ ಪಡೆಗೆ 70 ರನ್ ಗಳ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಶಮಿ, ಟೀಮ್ ಇಂಡಿಯಾ ಫೈನಲ್ ಹಂತ ತಲುಪಲು ಮಹತ್ತರ ಕಾಣಿಕೆ ನೀಡಿದ್ದಾರೆ.
ಜಹೀರ್ ಖಾನ್ ದಾಖಲೆ ಮುರಿದ ಮೊಹಮ್ಮದ್ ಶಮಿ
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಕೇವಲ 6 ಪಂದ್ಯಗಳಲ್ಲೇ 23 ವಿಕೆಟ್ ಪಡೆದ ಶಮಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ವೇಗಿ ಜಹೀರ್ ಖಾನ್ 21 ವಿಕೆಟ್ ಪಡೆದು ಗಮನ ಸೆಳೆದಿದ್ದರು.