ಭೋಪಾಲ್: ಮೋದಿ ಗ್ಯಾರಂಟಿಗಳ ಮುಂದೆ ತಮ್ಮ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂಬುದು ವಿರೋಧ ಪಕ್ಷವು ಒಪ್ಪಿ ಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ (Madhya Pradesh) ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ನಾಯಕರು ಮನೆಯಲ್ಲಿ ಕುಳಿತಿದ್ದಾರೆ. ಅವರಿಗೆ ಹೊರಗೆ ಹೋಗಲು ಸಹ ಆಗುತ್ತಿಲ್ಲ. ಕಾಂಗ್ರೆಸ್ (Congress) ನಾಯಕರಿಗೆ ಅವರು, ಜನರಿಗೆ ಏನು ಹೇಳುತ್ತಾರೆಂದು ತಿಳಿದಿಲ್ಲ. ಮೋದಿ ಅವರ ಭರವಸೆಗಳ ಮುಂದೆ ತನ್ನ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ನ ಭ್ರಷ್ಟಾಚಾರ ಮತ್ತು ಲೂಟಿಯ ಕೈಗಳು ಮಧ್ಯಪ್ರದೇಶದ ಖಜಾನೆಗೆ ತಾಗದಂತೆ ನೋಡಿಕೊಳ್ಳಲು ಈ ಚುನಾವಣೆ ಬಂದಿದೆ. ಕಾಂಗ್ರೆಸ್ನ ಕೈಗೆ ಕದಿಯಲು ಮತ್ತು ಲೂಟಿ ಮಾಡಲು ಗೊತ್ತಿದೆ ಎಂಬುದನ್ನು ನೀವು (ಜನರು) ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಎಲ್ಲೇ ಬಂದರೂ ವಿನಾಶ ತರುತ್ತದೆ ಎಂಬುದು ನಿಮಗೆ ತಿಳಿದಿದೆ ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯನ್ನು ಕಾಂಗ್ರೆಸ್ ಎಂದಿಗೂ ನಂಬಲಿಲ್ಲ. ರಾಮಮಂದಿರ ನಿರ್ಮಾಣವು ನಿಜವಾಗಲಿದೆ ಎಂದು ಅವರು ಎಂದಿಗೂ ಯೋಚಿಸಿರಲಿಲ್ಲ. ಆದರೆ ನಾವು ಅದನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.