ಬಾಲಿವುಡ್ ಖ್ಯಾತ ನಟಿ ಕಾಜೋಲ್ (Kajol)ಅವರ ಡೀಪ್ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಕತ್ರಿನಾ (Katrina) ನಂತರ ಮತ್ತೋರ್ವ ನಟಿ ಇಂಥದ್ದೊಂದು ಕುತಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ಡೀಪ್ಫೇಕ್ ವಿಡಿಯೋ ಕಂಡು ನಟಿ ಗರಂ ಆಗಿದ್ದಾರೆ. ಕೂಡಲೇ ದುರುಳರಿಗೆ ಹೆಡೆಮುರಿ ಕಟ್ಟುವಂತೆ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಇಂತಹ ವಿಡಿಯೋಗಳು ಹರಿದಾಡುತ್ತಿವೆ. ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ.
ಬೆನ್ನುಬಿದ್ದ ದೆಹಲಿ ಪೊಲೀಸ್
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ಫೇಕ್ (Deepfake) ವೀಡಿಯೋ ವಿಚಾರವಾಗಿ ದೆಹಲಿ (Delhi) ಪೊಲೀಸರು (Police) ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ.
ಶಂಕಿತ ಯುವಕ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ಅಲ್ಲದೇ ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವಕನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಮೊದಲು ಅಪ್ಲೋಡ್ ಮಾಡಿದ್ದರಿಂದ ತನಿಖೆಗೆ ಹಾಜರಾಗುವಂತೆ ಯುವಕನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.