ನವದೆಹಲಿ: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಂದೆ ಮೊಬೈಲ್ನಲ್ಲಿ ನಡೆಸಿದ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ. 48 ಸೆಕೆಂಡ್ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಸರ್ಕಾರವನ್ನು ಹಣಿಯಲು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರು,
ಅಧಿಕಾರಿಗಳ ವರ್ಗಾವಣೆ ಕುರಿತಂತೆ ಮಾತನಾಡುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ‘ಸಿದ್ದರಾಮಯ್ಯ ಸರ್ಕಾರದ ರಿಮೋಟ್ ಅವರ ಮಗ ಯತೀಂದ್ರ ಅವರ ಕೈಲಿದೆ’ ಎಂದು ಕೇಂದ್ರ ಸಚಿವ ಹಾಗೂ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಕಾಂಗ್ರೆಸ್ನ ಯುಪಿಎ ಸರ್ಕಾರದ ಅವಧಿಯಲ್ಲಿ ರಿಮೋಟ್ ಕಂಟ್ರೋಲ್ ಸೋನಿಯಾ ಗಾಂಧಿ ಮತ್ತವರ ಮಗ ರಾಹುಲ್ ಗಾಂಧಿಯವರ ಕೈಯಲ್ಲಿತ್ತು. ಹಾಗಾಗಿ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನ ರಿಮೋಟ್ ಕಂಟ್ರೋಲ್ ಸಿದ್ದರಾಮಯ್ಯನವರ ಮಗನ ಕೈಯಲ್ಲಿದೆ’ ಎಂದು ಅವರು ಕುಟುಕಿದ್ದಾರೆ.