ಟೆಲ್ ಅವೀವ್: ಗಾಜಾದ ಅಲ್ ಶಿಫಾ ಆಸ್ಪತ್ರೆ ಹಮಾಸ್ (Hamas) ಉಗ್ರರ ಕಾರ್ಯಸ್ಥಾನ ಎಂದು ಇಸ್ರೇಲ್ (Israel) ಮೊದಲಿಂದ ಹೇಳುತ್ತಾ ಬಂದಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತದೆ ಎಂಬುದಕ್ಕೆ ತನ್ನ ಪಡೆಗಳು ಪುರಾವೆಗಳನ್ನು ಕಂಡುಕೊಂಡಿವೆ ಎಂದು ಇಸ್ರೇಲ್ ಮತ್ತೆ ಹೇಳಿಕೊಂಡಿದೆ.
ಅಲ್ ಶಿಫಾ ಆಸ್ಪತ್ರೆಯ (Al-Shifa Hospital) ಎಂಆರ್ಐ ಯೂನಿಟ್ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್ ತಿಳಿಸಿದೆ. ಹಮಾಸ್ಗೆ ಸೇರಿದ ಬ್ಯಾಗ್ಗಳಲ್ಲಿ ಎಕೆ 47, ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರ ಸಿಕ್ಕಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇಸ್ರೇಲ್ ಸೇನೆ (Israeli Defence Force) ಬಿಡುಗಡೆ ಮಾಡಿದೆ.
ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್ಗಳು ನುಗ್ಗಿವೆ ಎಂದು ವರದಿಯಾಗಿದೆ. ಬುಲ್ಡೋಜರ್ಗಳು ದಕ್ಷಿಣ ಭಾಗದ ಗೇಟ್ ಅನ್ನು ಧ್ವಂಸ ಮಾಡಿದೆ. ಹಮಾಸ್ ಉಗ್ರರ ಸುರಂಗಗಳನ್ನು ಪತ್ತೆ ಹಚ್ಚಲು ಇಸ್ರೇಲ್ ಪಡೆಗಳು ಬುಲ್ಡೋಜರ್ ಅಸ್ತ್ರವನ್ನು ಪ್ರಯೋಗಿಸಿವೆ. ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಮನೆಯನ್ನು ಐಡಿಎಫ್ ನಾಶ ಮಾಡಿದೆ. ಈಗಾಗಲೇ ಪ್ಯಾಲೆಸ್ತೇನ್ ಸಂಸತ್ನ್ನು ನೆಲಸಮ ಮಾಡಿದೆ.