ಬೆಂಗಳೂರು:- ಬಿಜೆಪಿಯ ಭ್ರಷ್ಟಾಚಾರದ ಆರೋಪಗಳಿಗೆ ಅಧಿವೇಶನದಲ್ಲಿ ಉತ್ತರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಆದರೆ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿರುವುದು ಅವರನ್ನು ಆತಂಕಕ್ಕೆ ದೂಡಿದ್ದು, ಇದರಿಂದ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿಯವರು ವಿವೇಕಾನಂದ ಎಂಬುವವರ ವರ್ಗಾವಣೆ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿವೇಕಾನಂದ ಎಂಬುವವರು ಮೈಸೂರು ಗ್ರಾಮಾಂತರ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿದ್ದಾರೆ. ಅವರ ಬಗ್ಗೆ ಮಾತನಾಡಲಾಗಿದೆಯೆ ಹೊರತು ಪೋಲಿಸ್ ಅಧಿಕಾರಿ ಬಗ್ಗೆಯಲ್ಲ, ವಿವಿಪುರಂ
ಇನ್ಸ್ ಪೆಕ್ಟರ್ ವಿವೇಕಾನಂದ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ, ವರ್ಗಾವಣೆಯಾಗಿರುವ ಬಗ್ಗೆ ಸ್ಥಳೀಯ ಶಾಸಕರನ್ನು ಕೇಳಲಿ ಎಂದರು.
ಕಾಂಗ್ರೆಸ್ ನವರು ಕೌರವ ಸಂಸ್ಕೃತಿಯನ್ನು ನನ್ನ ಬಳಿ ತೋರಿಸುವುದು ಬೇಡ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಉತ್ತರಿಸುತ್ತಾ, ಕುಮಾರಸ್ವಾಮಿಯವರು ಎಂದಿಗೂ ತಾವು ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಿಲ್ಲ. ದ್ವೇಷ ಹಾಗೂ ಅಸೂಯೆಯ ರಾಜಕಾರಣ ಮಾಡುತ್ತಿದ್ದಾರೆ. 38 ಸ್ಥಾನದಲ್ಲಿದ್ದ ಜೆಡಿಎಸ್ ನವರು ಈಗ 19 ಸ್ಥಾನಕ್ಕೆ ಇಳಿದಿದ್ದಾರೆ. ಅವರು ಮಾಡುವ ಸುಳ್ಳು ಆರೋಪಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದರು.