ಬೆಂಗಳೂರು:– ಗ್ಯಾರಂಟಿ ಜಾರಿ ಪರಿಶೀಲನೆಗೆ ಕಾಂಗ್ರೆಸ್ನಿಂದ ಸಮಿತಿ ರಚಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಗಳು ಮನೆಮನೆಗೆ ತಲುಪಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಾಂಗ್ರೆಸ್ ಪಕ್ಷದಿಂದ ಸಮಿತಿ ರಚಿಸಲಾಗುವುದು ಎಂದರು.
ಕಾಂಗ್ರೆಸ್ ಸಂಸ್ಥಾಪನಾ ದಿನವಾದ ನ.28ರಂದು ಸಮಿತಿಗೆ ಚಾಲನೆ ನೀಡಲಾಗುತ್ತದೆ. ಕಾರ್ಯಕರ್ತರು ರಾಜ್ಯದ ಪ್ರತಿ ಮನೆ ಹಾಗೂ ಬೂತ್ಗೆ ತೆರಳಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಜನರೊಂದಿಗೆ ಮಾತನಾಡಿ ಏನಾದರೂ ಬದಲಾವಣೆ ಅಗತ್ಯವಿದೆಯೇ, ಸಮಸ್ಯೆಯಿದೆಯೇ, ತಿದ್ದುಪಡಿಯಾಗಬೇಕಿದೆಯೇ ಎಂಬುದನ್ನು ಕೇಳಿ, ಅವರ ಸಮಸ್ಯೆಗೆ ಸ್ಪಂದಿಸಬೇಕು. ರಾಜ್ಯದ ಎಲ್ಲ ಘಟಕಗಳ ಅಧ್ಯಕ್ಷರು, ಶಾಸಕರು ಹಾಗೂ ಬ್ಲಾಕ್ ಅಧ್ಯಕ್ಷರು ಈ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಪರಿಶೀಲನೆ ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ಗೆ ಮತ ಹಾಕಿದರೆ, ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್ ತೆಗೆದುಕೊಳ್ಳುವಂತಹ ಕಾನೂನು ತರುತ್ತಾರೆ ಎಂಬ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು. ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ಧಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುವುದಿಲ್ಲ. ಎಲ್ಲ ಗ್ಯಾರಂಟಿಗಳು ಇರುವುದು ನಿಶ್ಚಿತ. ಮುಂದಿನ ನಾಲ್ಕು ವರ್ಷಗಳಲ್ಲಿ ಯಾರು ಇರುತ್ತಾರೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡುತ್ತಿದೆ. ಇಂತಹ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಜನರಿಗೆ ಕಾರ್ಯಕರ್ತರು ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.