ಇಲ್ಲೊಬ್ಬರು ತಂದೆ ತಮ್ಮ ಮಗಳ ಬರ್ತ್ಡೇಗೆ ಬಾಟಲ್ನಲ್ಲಿ ಕೊಳಚೆ ನೀರು ತುಂಬಿಸಿ ನೀಡಿದ್ದಾಳೆ., ಈ ವಿಚಾರವನ್ನು ಸ್ವತಃ ಮಗಳೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಅನಿರೀಕ್ಷಿತ ಗಿಫ್ಟ್ನ ಕಾರಣದಿಂದ ಜನ ಕುತೂಹಲದಿಂದ ಈಕೆಯ ಈ ಪೋಸ್ಟ್ನ್ನು ವೀಕ್ಷಿಸಿದ್ದು, ಈಗ 3 ಮಿಲಿಯನ್ಗೂ ಹೆಚ್ಚು ಜನ ಪೋಸ್ಟ್ ವೀಕ್ಷಿಸಿ, ವೈರಲ್ ಆಗಿದೆ. ಆದರೆ ಇದರಲ್ಲೊಂದು ಜೀವನ ಪಾಠವಿದೆ…! ಈ ವಿಚಾರವನ್ನು ಮಗಳು ಪೆಟ್ರಿಶಿಯ ಮೌ ತನ್ನ ಪೋಸ್ಟ್ನಲ್ಲಿ ವಿವರಿಸಿದ್ದು, ತಂದೆ ಇದುವರೆಗೆ ನೀಡಿದ ವಿಭಿನ್ನ ಗಿಫ್ಟ್ಗಳ ಬಗೆ ವಿವರಿಸಿದ್ದಾಳೆ.
ನನ್ನ ತಂದೆ ಈ ರೀತಿ ವಿಭಿನ್ನ ಗಿಫ್ಟ್ ನೀಡುವುದು ಇದೇ ಮೊದಲೇನಲ್ಲ, ಈ ಹಿಂದೆ ಅವರು ನನಗೆ ಪ್ರಥಮ ಚಿಕಿತ್ಸೆ ಕಿಟ್, ಪೆಪ್ಪರ್ ಸ್ಪೇ, ವಿಶ್ವಕೋಶ(encyclopedia) ಕೀ ಚೈನ್ ಇವಿಷ್ಟೇ ಅಲ್ಲದೇ ತಾನೇ ಮಗಳಿಗಾಗಿ ಬರೆದ ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಇವೆಲ್ಲವೂ ಉತ್ತಮವಾದ ಅಪ್ಪನ ಈ ಹಿಂದಿನ ಗಿಫ್ಟ್ಗಳಾಗಿದ್ದವು ಎಂದು ಮಗಳು ಬಣ್ಣಿಸಿದ್ದಾಳೆ. ಆದರೆ ಈ ಬಾರಿ ಪಡೆದ ಗಿಫ್ಟ್ ಮತ್ತಷ್ಟು ವಿಶೇಷವಾಗಿತ್ತು. ಏಕೆಂದರೆ ಇವು ಹಣ ಕೊಟ್ಟು ಎಂದಿಗೂ ಖರೀದಿಸಲಾಗದ ಅಮೂಲ್ಯ ಜೀವನ ಪಾಠವನ್ನು ಒಳಗೊಂಡಿವೆ ಎಂದು ತಂದೆ ಹೇಳಿದ್ದರು ಎಂದು ಮಗಳು ಹೇಳಿದ್ದಾಳೆ.
ರಾಡಿಗೊಂಡ ಕೊಳಚೆ ನೀರು ಕೂಡ ಪ್ರಶಾಂತವಾದಾಗ ಅದರಲ್ಲಿರುವ ಕೊಳಚೆ ಒಂದು ಕಡೆ ನಿಂತರೆ ತಿಳಿ ನೀರು ಮೇಲೆ ನಿಂತಿರುತ್ತದೆ. ಕೊಳಕಿನಿಂದ ತುಂಬಿರುವ ನೀರು ಗಲಿಬಿಲಿಗೊಂಡ ಮನಸ್ಸನ್ನು ಪ್ರತಿನಿಧಿಸುತ್ತದೆ. ಅಂದರೆ ಮನಸ್ಸು ಗಲಿಬಿಲಿಗೊಂಡಾಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದು, ಮನಸು ವಿಚಲಿತವಾದಾಗ ನಮಗೆ ಎಲ್ಲವೂ ಕೆಟ್ಟದಾಗಿಯೇ ಕಾಣುತ್ತದೆ. ರಾಡಿಯಾದ ನೀರು ಕೂಡ ತಿಳಿಯಾದಾಗ ಹೇಗೆ ಕಲ್ಮಶದಿಂದ ಹೊರಗೆ ಬರುತ್ತದೆಯೋ ಹಾಗೆಯೇ ಗಲಿಬಿಲಿಗೊಂಡ ಮನಸ್ಸು ಕೂಡ ಪ್ರಶಾಂತಗೊಂಡಾಗ ಒಳ್ಳೆಯ ಚಿಂತನೆ ಸಾಧ್ಯವಾಗುತ್ತದೆ. ಕೆಟ್ಟ ನೀರನ್ನು ತುಂಬಿದ ಬಾಟಲ್ನಲ್ಲಿಯೂ ಕೂಡ ನೀರನ್ನು ಕಲಕದೇ ಇದ್ದಲ್ಲಿ ಕೇವಲ 10 ಶೇಕಡಾ ಅಷ್ಟು ಮಾತ್ರ ಕೊಳಕು ತುಂಬಿರುತ್ತದೆ.
ಹೀಗಾಗಿ ಜೀವನದಲ್ಲಿ ಶಾಂತ ಚಿತ್ತತೆ ಉತ್ತಮ ದೃಷ್ಟಿಕೋನವನ್ನು ಇರಿಸಿಕೊಳ್ಳುವುದು ಮುಖ್ಯ ಎಂಬುದು ತಂದೆ ಈ ಗಿಫ್ಟ್ ಮೂಲಕ ತಿಳಿಸಿದ ಪಾಠ ಎಂದು ಮಗಳು ಹೇಳಿಕೊಂಡಿದ್ದಾಳೆ. ತಂದೆ ನೀಡಿದ ಈ ಗಿಫ್ಟ್ ಮಗಳ ಮನಸ್ಸಿನಲ್ಲಿ ಆಳವಾದ ಚಿಂತನೆಯನ್ನು ಬೇರೂರಿಸಿದೆ. ಅಪ್ಪ ಕೊಟ್ಟ ಈ ಸುಂದರವಾದ ಗಿಫ್ಟ್ನಲ್ಲಿದ್ದ ನೀರನ್ನು ಮರಳಿ ಸಮುದ್ರಕ್ಕೆ ಚೆಲ್ಲಿದ ಆಕೆ ಅದರಲ್ಲೇ ಮತ್ತೊಂದು ಚಿಂತನೆ ಹುಟ್ಟಿತು ಎಂದು ಹೇಳಿಕೊಂಡಿದ್ದಾಳೆ. ಅದೆಂದರೆ ನೀವು ಸಮುದ್ರದಲ್ಲಿರುವ ಒಂದು ಹನಿ ನೀರಲ್ಲ, ಹನಿ ನೀರಲ್ಲಿರುವ ದೊಡ್ಡ ಸಮುದ್ರ ನೀವು ಎಂಬುದು ಎಂದು ಆಕೆ ಹೇಳಿದ್ದಾಳೆ. ಈ ರೀತಿಯ ಅಪೂರ್ವವಾದ ಜೀವನ ಮೌಲ್ಯಗಳನ್ನು ಕಲಿಸುವ ಗಿಫ್ಟ್ ನೀಡಿದ ತಂದೆಗೆ ತಾನು ಋಣಿಯಾಗಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.