ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸೋಕೆ ಸಮಯ ಸಿಗ್ತಿಲ್ಲ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್ ಫುಡ್ಗಳ ಹಾವಳಿಯೇ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯಕರ ಆಹಾರಗಳು ಯಾವುದು? ಅದರ ಲಾಭಗಳೇನು..? ಎನ್ನುವ ವಿಷಯವೇ ಅನೇಕರಿಗೆ ತಿಳಿದಿಲ್ಲ. ಫಾಸ್ಟ್ ಫುಡ್ಸ್ ಗಳ ರುಚಿಗೆ ಮನಸೋತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಲ್ಲ.
ಹೌದು, ಇಂತಹ ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು ತರಕಾರಿ, ಕಾಳುಗಳು ಆರೋಗ್ಯ ವೃದ್ಧಿಸುವಲ್ಲಿ ತುಂಬಾ ಉಪಯುಕ್ತ. ಅದರಲ್ಲೂ ಮೊಳಕೆ ಬಂದ ಕಾಳುಗಳ ಸೇವನೆಯಿಂದ ಎಷ್ಟು ಲಾಭ ಎನ್ನುವುದು ಹಲವರಿಗೆ ಗೊತ್ತಿರಲ್ಲ. ಕಾಳುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ಅದನ್ನು ನೀರಲ್ಲಿ ನೆನಸಿಟ್ಟು, ಮೊಳಕೆ ಬಂದ ಮೇಲೆ ತಿಂದ್ರೆ ಅದರಲ್ಲಿ ಪೌಷ್ಟಿಕಾಂಶ ಜಾಸ್ತಿ ಇರುತ್ತದೆ.
ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂದ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಮೊಳಕೆ ಕಾಳಲ್ಲಿ ಪ್ರೋಟಿನ್, ಫೈಬರ್, ವಿಟಮಿನ್ಸ್, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಆರೋಗ್ಯಕರ ಅಂಶಗಳು ಇರುತ್ತದೆ. ಆದ್ದರಿಂದ ಮೊಳಕೆ ಕಾಳು ದೇಹಕ್ಕೆ ಒಳ್ಳೆಯದು.
ಅನೇಕ ಅದ್ಭುತ ಲಾಭಗಳನ್ನು ತನ್ನೊಳಗೆ ಅಡಗಿಸಿಕೊಂಡಿರೋ ಮೊಳಕೆ ಕಾಳುಗಳಲ್ಲಿ ಮೊಳಕೆ ಒಡೆದ ಹೆಸರು ಕಾಳು ಒಂದು. ಈ ಮೊಳಕೆ ಒಡೆದ ಹೆಸರು ಕಾಳು ಆರೋಗ್ಯಕ್ಕೆ ಎಷ್ಟು ಉಪಯುಕ್ತ? ಅದರ ಲಾಭಗಳೇನು? ಅದನ್ನು ಯಾಕೆ ಸೇವಿಸಬೇಕು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ..
ಮೊಳಕೆ ಬಂದ ಹೆಸರು ಕಾಳಿನ ಲಾಭಗಳೇನು?
ಜೀರ್ಣಶಕ್ತಿ ವೃದ್ಧಿಸುತ್ತೆ
ಹೆಸರು ಕಾಳನ್ನು ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತೆ. ಇದರಲ್ಲಿರೋ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತೆ
ಮೊಳಕೆ ಬಂದ ಹೆಸರು ಕಾಳು ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಇದರಲ್ಲಿರೋ ಒಮೇಗಾ ಫ್ಯಾಟೀ ಆಸಿಡ್ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನ ಅಂಶ ನೀಡಿ ರಕ್ತನಾಳದ ಆರೋಗ್ಯ ಕಾಪಾಡುತ್ತೆ. ಇದರಲ್ಲಿನ ಆಂಟಿ ಇನ್ಪ್ಲಮೇಟರಿ ಗುಣ ರಕ್ತನಾಳಗಳ ಮೇಲಿರೋ ಒತ್ತಡವನ್ನೂ ಕಡಿಮೆ ಮಾಡುತ್ತದೆ. ರಕ್ತದ ಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗುವ ಹಾಗೆ ಮಾಡಿ ಸ್ಟ್ರೋಕ್ ಹಾಗೂ ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗೋದನ್ನ ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ಬಾರದ ಹಾಗೆ ನೋಡಿಕೊಳ್ಳುತ್ತದೆ
ವಿಟಮಿನ್ ಎ, ಸಿ, ಅಮಿನೋ ಆಸಿಡ್ಸ್ ಹಾಗೂ ಪ್ರೋಟಿನ್ ಅಂಶ ದೇಹದಲ್ಲಿ ಫ್ರೀ ರಾಡಿಕಲ್ಸ್ ಸೇರದ ಹಾಗೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಆಗುವ ಹಲವಾರು ಕ್ರಿಯೆಗಳ ಪರಿಣಾಮವಾಗಿ ಫ್ರೀ ರಾಡಿಕಲ್ಸ್ ಉತ್ಪತ್ತಿ ಆಗುತ್ತದೆ. ಇದರಿಂದ ದೇಹಕ್ಕೆ ಕ್ಯಾನ್ಸರ್ ಸೆಲ್ಸ್ ಸೇರುತ್ತದೆ. ಅಷ್ಟೇ ಅಲ್ಲದೆ ಸಾಕಷ್ಟು ಕಾಯಿಲೆಗಳು ಬರೋದಕ್ಕೆ ಇದು ಕಾರಣವಾಗುತ್ತದೆ. ಬೇಗ ಸುಸ್ತಾಗೋದು, ಕಣ್ಣು ಮಂಜಾಗುವುದು, ಹೃದಯಕ್ಕೆ ಸಂಬಂಧ ಪಟ್ಟ ತೊಂದರೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇಂತಹ ತೊಂದರೆಗಳಿಂದ ದೂರವಿರಲು ಮೊಳಕೆ ಬಂದ ಹೆಸರು ಕಾಳನ್ನು ಸೇವಿಸಬೇಕು.
ತೂಕ ಕಡಿಮೆ ಮಾಡುತ್ತದೆ ಹಾಗೂ ತ್ವಚೆಯ ಆರೋಗ್ಯ ಕಾಪಾಡುತ್ತೆ
ಮೊಳಕೆ ಬಂದ ಹೆಸರು ಕಾಳಿನಲ್ಲಿ ಕ್ಯಾಲೋರೀಸ್ ಇಲ್ಲದ ಕಾರಣ ಇದನ್ನು ಎಷ್ಟು ತಿಂದರೂ ತೂಕ ಹೆಚ್ಚಾಗಲ್ಲ. ಬದಲಾಗಿ ತೂಕ ಕಡಿಮೆ ಆಗುತ್ತೆ. ಮೊಳಕೆ ಬಂದ ಹೆಸರು ಕಾಳನ್ನು ತಿನ್ನುವುದರಿಂದ ಇದರಲ್ಲಿರೋ ಫೈಬರ್ ನಿಮ್ಮ ದೇಹಕ್ಕೆ ಸೇರಿ ಹೊಟ್ಟೆ ತುಂಬುವ ಹಾಗೆ ಮಾಡುತ್ತೆ. ಆದರ ಜೊತೆ ಪದೇ ಪದೇ ಹಸಿವಾಗದ ರೀತಿ ನೋಡಿಕೊಳ್ಳುತ್ತದೆ. ಹಾಗೆಯೇ ಸ್ಥೂಲಕಾಯ ಮತ್ತು ಮಧುಮೇಹ ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತದೆ. ಪ್ರತಿನಿತ್ಯ ಹೆಸರು ಕಾಳನ್ನು ತಿನ್ನುವುದರಿಂದ ತ್ವಚೆಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಲ್ಲದೆ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಇದರಿಂದ ಆಕರ್ಷಕ ಸೌಂದರ್ಯವನ್ನು ಕೂಡ ನೀವು ಪಡೆಯಬಹುದು.