ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ತಮ್ಮ ಬ್ರ್ಯಾಂಡ್ನತ್ತ ಸೆಳೆಯಲು ಕಂಪನಿಗಳು ಸಾಲುಗಟ್ಟಿ ನಿಂತಿವೆ. ಇದರ ಬೆನ್ನಲ್ಲೇ ವಿಶ್ವಕಪ್ನಲ್ಲಿನ ಉತ್ತಮ ಪ್ರದರ್ಶನದಿಂದ ಅವರ ಬ್ರ್ಯಾಂಡ್ ಅನುಮೋದನೆ ಶುಲ್ಕ ದುಪ್ಪಟ್ಟಾಗಿದ್ದು, ವಿಶ್ವಕಪ್ ಅವಧಿಯಲ್ಲೇ 1 ಕೋಟಿ ರೂ.ಗೆ ಏರಿಕೆ ಕಂಡಿದೆ. ಈ ಮೂಲಕ ವಿಕೆಟ್ ಗಳಿಕೆಯ ದಾಖಲೆ ಮುರಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ನ ಹೊಸ ಪೋಸ್ಟರ್ ಬಾಯ್ ಆಗಿ ಅವರು ಹೊರಹೊಮ್ಮಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ ಪೌಷ್ಠಿಕಾಂಶಯುಕ್ತ ಮತ್ತು ಆರೋಗ್ಯ ಪಾನೀಯಗಳು, ಎಲೆಕ್ಟ್ರಾನಿಕ್ಸ್ ಮತ್ತು ಹೆಡ್ಫೋನ್ ಕಂಪನಿಗಳು ಶಮಿಯನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲು ಉತ್ಸುಕವಾಗಿವೆ ಎಂದು ಫ್ಲೇರ್ ಮೀಡಿಯಾ ಸಂಸ್ಥಾಪಕ ಸೌರಜಿತ್ ಚಟರ್ಜಿ ಹೇಳಿದ್ದಾರೆ. ಫ್ಲೇರ್ ಮೀಡಿಯಾ ಕೋಲ್ಕತ್ತಾ ಮೂಲದ ಅಥ್ಲೀಟ್ ಮತ್ತು ಕ್ರೀಡಾ ನಿರ್ವಹಣಾ ಕಂಪನಿಯಾಗಿದ್ದು 33 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಯ ಜಾಹೀರಾತು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.
“ನಾವು ಶೀಘ್ರದಲ್ಲೇ ಕೆಲವು ಪ್ರಮುಖ ಬ್ರ್ಯಾಂಡ್ ಡೀಲ್ಗಳನ್ನು ಎದುರು ನೋಡುತ್ತಿದ್ದೇವೆ,” ಎಂದು ಚಟರ್ಜಿ ಎಕನಾಮಿಕ್ ಟೈಮ್ಸ್ಗೆ ತಿಳಿಸಿದ್ದಾರೆ. “ವಾರ್ಷಿಕ ಬ್ರ್ಯಾಂಡ್ ಅಂಬಾಸಿಡರ್ ಡೀಲ್ಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಸಹಯೋಗ ಹಾಗೂ ಶಮಿ ಉಪಸ್ಥಿತಿಗಾಗಿ ಕಳೆದ ಎರಡು ಮೂರು ವಾರಗಳಿಂದ ಪ್ರತಿ ಎರಡು ದಿನಕ್ಕೊಂದು ಮೇಲ್, ಕರೆಗಳು ಬರುತ್ತಿವೆ,” ಎಂದು ಅವರು ಹೇಳಿದ್ದಾರೆ.