ಬೆಂಗಳೂರು: ಬೆಂಗಳೂರಿನ ಲುಲು ಮಾಲ್ ನಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಅಂತಹುದೇ ಮತ್ತೊಂದು ಲೈಂಗಿಕ ಕಿರುಕುಳ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಈ ಬಾರಿ ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಜನರಿಂದ ತುಂಬಿ ತುಳುಕುತ್ತಿದ್ದ ಮೆಟ್ರೋ ನಿಲ್ದಾಣದಲ್ಲಿ ದುಷ್ಕರ್ಮಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣ Reddit ವಿಚಾರ ಬಹಿರಂಗ ಪಡಿಸಿದ್ದು, ಕೂಡಲೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 8.30ರ ಸುಮಾರಿನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನೆಡೆದಿದೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿರುವಂತೆ, ‘ಆಕೆ ನಿತ್ಯ ಕಾಲೇಜಿಗೆ ಬಸ್ನಲ್ಲೇ ತೆರಳುತ್ತಿದ್ದಳು. ಆದರೆ, ಅಂದು ಬೆಳಿಗ್ಗೆ 8.30ರ ಸುಮಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಲು ಮೆಜೆಸ್ಟಿಕ್ಗೆ ಬಂದಿದ್ದಳು. ಮೆಟ್ರೊ ಏರುವಾಗ ದಟ್ಟಣೆಯಿತ್ತು. ರೈಲು ಏರಿದ ಮೇಲೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಮುಂದಕ್ಕೆ ತೆರಳಿ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಪ್ರಯಾಣಿಕರು ನೆರವಿಗೆ ಬಂದಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಬಳಿಕ ಇದನ್ನು ಗಮನಿಸಿದ ಹಲವರು ಮೆಟ್ರೊ ಸಂಪೂರ್ಣ ಸಿಸಿ ಟಿ.ವಿ ಕ್ಯಾಮೆರಾದ ಕಣ್ಗಾವಲಿನಲ್ಲಿದೆ. ದೂರು ಸಲ್ಲಿಸಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನೂ ಸಂಪರ್ಕಿಸಿ ದೂರು ನೀಡಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.