ಬೆಂಗಳೂರು:- ‘ನಮ್ಮ ಮೆಟ್ರೊ’ದಲ್ಲಿ ಶೂಟಿಂಗ್ ನಡೆಸಲು BMRCL ಅಧಿಕಾರಿಗಳು ಅನುಮತಿ ನೀಡಿದ್ದು, ಹೀಗಾಗಿ ಕನ್ನಡ ಸಿನಿಮಾಕ್ಕೆ ದರ ಇಳಿಸುವಂತೆ ಮನವಿ ಮಾಡಿದ್ದಾರೆ
ನಮ್ಮ ಮೆಟ್ರೊ’ದಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ನಡೆಸಲು ಅವಕಾಶ ನೀಡಿರುವುದನ್ನು ಸಿನಿಮಾ ರಂಗ ಸ್ವಾಗತಿಸಿದೆ. ಆದರೆ, ದಿನಕ್ಕೆ ನಿಗದಿಪಡಿಸಿರುವ ₹ 6 ಲಕ್ಷ ಬಾಡಿಗೆ ಬಹಳ ದುಬಾರಿಯಾಗಿದ್ದು, ಕನ್ನಡ ಸಿನಿಮಾಗಳಿಗೆ ಹೆಚ್ಚು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದೆ.
ಮೆಟ್ರೊ ಸಂಚಾರ ಆರಂಭವಾದಾಗ ಶೂಟಿಂಗ್ಗೆ ಅವಕಾಶ ನೀಡಲಾಗಿತ್ತು. ‘ನಟಸಾರ್ವಭೌಮ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮೆಟ್ರೊ ರೈಲಿನ ಒಳಾಂಗಣ ದೃಶ್ಯಗಳಿವೆ. ನಂತರದಲ್ಲಿ, ಭದ್ರತೆಯ ಕಾರಣಕ್ಕಾಗಿ ಶೂಟಿಂಗ್ಗೆ ಅನುಮತಿ ನೀಡುವುದನ್ನು ನಿಲ್ಲಿಸಲಾಗಿತ್ತು. ಐದು ವರ್ಷಗಳಿಂದ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿರಲಿಲ್ಲ. ಮೆಟ್ರೊ ನಿಲ್ದಾಣ ಮತ್ತು ಮೆಟ್ರೊ ರೈಲುಗಳಲ್ಲಿ ಹಾಡು, ಫೈಟಿಂಗ್ ಇನ್ನಿತರ ದೃಶ್ಯಗಳ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು ಎಂದು ಚಿತ್ರರಂಗದವರು ಬೇಡಿಕೆ ಇಟ್ಟಿದ್ದರು.
ಇದಕ್ಕೆ ಸ್ಪಂದಿಸಿರುವ ಬಿಎಂಆರ್ಸಿಎಲ್ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲು ನಿರ್ಧರಿಸಿದೆ. ಚಿತ್ರಕಥೆಗೆ ಅನುಗುಣವಾಗಿ ಚಿತ್ರೀಕರಣ ಮಾಡಬೇಕು. ಮೆಟ್ರೊ ರೈಲು ಅಥವಾ ನಿಲ್ದಾಣಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ದಟ್ಟಣೆ ಇಲ್ಲದ ಸಮಯದಲ್ಲಿ ಮಾತ್ರ ಶೂಟಿಂಗ್ ಮಾಡಬೇಕು. ಪ್ರಯಾಣಿಕರಿಗೆ ತೊಂದರೆ ನೀಡಬಾರದು ಮುಂತಾದ ನಿಬಂಧನೆಗಳನ್ನು ವಿಧಿಸಿದೆ.