ಚಂಡೀಗಢ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಟ್ರಕ್ ಅನ್ನು ರೈಲ್ವೇ ಹಳಿ ಮೇಲೆ ಬಿಟ್ಟಿದ್ದು, ಅದೇ ಮಾರ್ಗವಾಗಿ ಆಗಮಿಸುತ್ತಿದ್ದ ರೈಲಿನ ಲೋಕೋ ಪೈಲಟ್ ಸಮಯಪ್ರಜ್ಞೆಯಿಂದಾಗಿ ಭಾರೀ ದುರಂತವೊಂದು ತಪ್ಪಿರುವ ಘಟನೆ ಪಂಜಾಬ್ನ ಲೂಧಿಯಾನಾದಲ್ಲಿ ನಡೆದಿದೆ.
ರಾತ್ರಿ ಟ್ರಕ್ ಚಾಲಕನೊಬ್ಬ ಕುಡಿದ ನಶೆಯಲ್ಲಿ ಟ್ರಕ್ ಅನ್ನು ಲೂಧಿಯಾನಾ-ದೆಹಲಿ ರೈಲ್ವೆ ಹಳಿಯಲ್ಲಿ ಓಡಿಸಿದ್ದಾನೆ. ಆತ ಶೇರ್ಪುರದಿಂದ ಲೂಧಿಯಾನ ರೈಲ್ವೆ ನಿಲ್ದಾಣದ ಕಡೆಗೆ ಹೋಗಿದ್ದು, ಈ ವೇಳೆ ಟ್ರಕ್ ಹಳಿಯ ಮೇಲೆ ಸಿಲುಕಿಕೊಂಡಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ತನಿಖಾಧಿಕಾರಿ ಜಸ್ವಿರ್ ಸಿಂಗ್ ಹೇಳಿದ್ದಾರೆ. ಟ್ರಕ್ ರೇಲ್ವೆ ಹಳಿಯಲ್ಲಿ ಸಿಲುಕಿಕೊಂಡ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರೈಲೊಂದು ಆಗಮಿಸಿದ್ದು,
ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಈ ವೇಳೆ ಹಳಿಯ ಮೇಲೆ ಟ್ರಕ್ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನು ತಿಳಿದ ಲೋಕೋ ಪೈಲಟ್ ಟ್ರಕ್ ನಿಂತಿದ್ದ ಸ್ಥಳದಿಂದ ಕೆಲವೇ ಮೀಟರ್ಗಳಷ್ಟು ದೂರದಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಾದ ಬಳಿಕ ಟ್ರಕ್ ಅನ್ನು ರೈಲ್ವೆ ಹಳಿಯಿಂದ ತೆರವುಗೊಳಿಸಿ, ಚಾಲಕನನ್ನು ಬಂಧಿಸಲಾಗಿದೆ. ಘಟನೆಯಿಂದಾಗಿ ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು 1 ಗಂಟೆಯ ನಂತರ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮದ್ಯದ ಅಮಲಿನಲ್ಲಿದ್ದುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.