ಬೆಂಗಳೂರು, ಡಿಸೆಂಬರ್ 1 : ಮುಂದಿನ ಐದು ವರ್ಷಗಳಲ್ಲಿ ಭಾರತದ ದೇಶ, ಕರ್ನಾಟಕ ಏಡ್ಸ್ ಮುಕ್ತ ದೇಶ /ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಇದ್ದ ವಿಶ್ವ ಏಡ್ಸ್ ದಿನ 2023 ಮತ್ತು 25 ನೇ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ ಐ ವಿ ಮುಕ್ತ ಸಮಾಜವಾಗಿಸುವುದು ಎಲ್ಲರ ಜವಾಬ್ದಾರಿ :
ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು.2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ. ಎಂದರು.
ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು
ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇನ್ನು ಐದಾರು ವರ್ಷಗಳಲ್ಲಿ ಸೊನ್ನೆಯ ದಿನ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ. ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ರೋಗಿಗಳೊಂದಿಗೆ ಮಾತನಾಡಿದರೆ ರೋಗ ಬರುತ್ತದೆ ಎಂದು. ಆದರೆ ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ ಕಾಯಿಲೆ ತಡೆಗಟ್ಟಲು ಸಾಧ್ಯ. ಆಮೇಲೆ ಅನುಭವಿಸುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದರೆ ಇದು ವಾಸಿಯಾಗದ ರೋಗ. ಇಷ್ಟೆಲ್ಲಾ ವಿಜ್ಞಾನದ ಬೆಳವಣಿಗೆಯಾದರೂ ಏಡ್ಸ್, ರೋಗಕ್ಕೆ ಮಾತ್ರ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದರು.
ಸಮುದಾಯ ಗಳು ಮುನ್ನಡೆಸಲಿ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷದ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 2017 ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದರು.
ಏಡ್ಸ್ ಪೀಡಿತರೊಂದಿಗೆ ಸಿಎಂ ಮಾತುಕತೆ
ಸಮಾರಂಭದಲ್ಲಿ ಭಾಗವಹಿಸಿದ್ದ ಏಡ್ಸ್ ತಗಲಿರುವ ವ್ಯಕ್ತಿಯೊಂದಿಗೆ ಮಾತನಾಡಿದ ಸಿಎಂ ಕಾಯಿಲೆ ಬಂದ ನಂತರ 26 ವರ್ಷಗಳ ಕಾಲ ಬದುಕಿದ್ದಾರೆ ಹಾಗೂ ಧೈರ್ಯವಾಗಿದ್ದಾರೆ ಎಂದು ಸಭಿಕರಿಗೆ ತಿಳಿಸಿದರು. ಆಂಜಿಯೋಪ್ಲಾಸ್ಟಿಯಾಗಿದ್ದರೂ ಧೈರ್ಯವಾಗಿ ಅದನ್ನು ಎದುರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಎಪಿಎಸ್ ಅಧ್ಯಕ್ಷ ಅಭಯ್ ಸಿಂಗ್, ಸಂಜನಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.