ದೆಹಲಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಂದು ಹೇಳಿಕೆ ಮೂಲಕ ನಾರಾಯಣ ಮೂರ್ತಿ ಅವರು ಚರ್ಚೆ ಹುಟ್ಟುಹಾಕಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಝಿರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಫೈರ್ಸೈಡ್ ಚಾಟ್ನಲ್ಲಿ ನಾರಾಯಣ ಮೂರ್ತಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಉಚಿತ ಕೊಡುಗೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ. ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸೇವೆಗಳನ್ನು ಪಡೆದ ನಂತರ ಸಮಾಜಕ್ಕೆ ಮರಳಿ ನೀಡುವಂತೆ ಜನರನ್ನು ಒತ್ತಾಯಿಸಿದ್ದಾರೆ.
ಉಚಿತ ಸೇವೆ ಒದಗಿಸುವುದನ್ನು ನಾನು ವಿರೋಧಿಸುವುದಿಲ್ಲ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಒಂದು ಕಾಲದಲ್ಲಿ ಬಡತನದ ಹಿನ್ನೆಲೆಯಿಂದ ಬಂದವನು. ಆದರೆ ಆ ಉಚಿತ ಸಬ್ಸಿಡಿಗಳನ್ನು ಪಡೆದ ಜನರಿಂದ ಏನನ್ನಾದರೂ ನಿರೀಕ್ಷಿಸಬೇಕು ಎಂದು ತಿಳಿಸಿದ್ದಾರೆ.