ಬೆಂಗಳೂರು:- ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ ಹೀಗಾಗಿ ಅದರ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ವರ್ಗಾವಣೆ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳ ಹಣ ಸಿಕ್ಕಿದ್ದು, ಇದು ವರ್ಗಾವಣೆ ದಂಧೆಯ ಸ್ಪಷ್ಟ ರೂಪ ಎಂದು ಆರೋಪಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ದ್ರೋಹ ಬಗೆಯಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ. ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್ನ 19 ಜನರು ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ. 236 ತಾಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಛಾಯೆ ಇದೆ. ಜೂನ್ನಲ್ಲಿ ಸಣ್ಣ ಮಳೆ, ಜುಲೈನಲ್ಲಿ ಮಳೆ ಇರಲಿಲ್ಲ. ಆಗಸ್ಟ್ನಲ್ಲಿ ಶೇ.73ರಷ್ಟು ಮಳೆ ಕೊರತೆ ಆಗಿದೆ. ರಾಜ್ಯ ಸರಕಾರ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ವಿಧಾನಸೌಧದಲ್ಲಿ ಕುಳಿತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು