ಬೆಂಗಳೂರು:– ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ.
13 ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ 3 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಸುಮಾರು 200ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಯಿಂದ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ
ಬೆಂಗಳೂರಿನಲ್ಲಿ 3 ಕಡೆಯಾದರೆ, ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿಯೂ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಸಂಬಂಧ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಸ್ಕಾಂ ಜಾಗೃತ ದಳ ಅಧಿಕಾರಿ T.N.ಸುಧಾಕರ್ ರೆಡ್ಡಿ ಮನೆ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೃಷ್ಣಮೂರ್ತಿ ಮನೆ ಹಾಗೂ ಕುಂಬಳಗೂಡು-ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ
ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ
ಇಂದು ಬೆಳ್ಳಂಬೆಳಗ್ಗೆ ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದ್ದು, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹೆಸರಿನಲ್ಲಿ ಎಂ ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಐ ಜಿ ಪಿ, ಸುಬ್ರಮಣ್ಣೀಶ್ವರ ರಾವ್ ಎಸ್. ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿಎಸ್ಪಿ, ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆದಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಲೋಕಯುಕ್ತ ದಾಳಿಯಾಗಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ, ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ
ಬೀದರ್ನಲ್ಲೂ ಸಹ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ. ಬೀದರ್ ನ ಪಶು ವೈಧ್ಯಕೀಯ ವಿಶ್ವವಿದ್ಯಾಲಯದ ನೌಕರರ ಸುನೀಲ್ ಕುಮಾರ್ ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ
ಇನ್ನು ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ.