ಬೆಂಗಳೂರು:– ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇಂದು ಅವರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಲಾಗುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಪ್ರಾಂಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಾಗ ಅದಕ್ಕೆ ನಮನ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರಿಹಾರ ಧನ ಘೋಷಣೆ ಮಾಡಿದ್ದರು. ಸದ್ಯ ಆದೇಶ ಹೊರಡಿಸಲಾಗಿದ್ದು, ಇಂದು ಪರಿಹಾರದ ಚೆಕ್ ಹಸ್ತಾಂತರಿಸಲಾಗುತ್ತದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.