ಜಕಾರ್ತ: ಇಂಡೋನೇಷ್ಯಾದ ಮೌಂಟ್ ಮರಾಪಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಈ ವೇಳೆ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭ ಅಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ.
11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ. ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜ್ವಾಲಾಮುಖಿಯಿಂದಾದ ದಟ್ಟವಾದ ಹೊಗೆ ಆಕಾಶದಲ್ಲಿ ಹರಡಿರುವುದು, ರಸ್ತೆ, ವಾಹನಗಳು ಜ್ವಾಲಾಮುಖಿಯ ಬೂದಿಯಿಂದ ಆವೃತವಾಗಿರುವುದು ಕಂಡುಬಂದಿದೆ.