ಬೆಂಗಳೂರು/ ಬೆಳಗಾವಿ:- ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಮೋಟಾರು ವಾಹನಗಳ ಖರೀದಿ ಮೇಲೆ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಇದರಿಂದ 25 ರಿಂದ 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಟೈಲರಿಂಗ್ ವೃತ್ತಿನಿರತ ಕಾರ್ಮಿಕರಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಯು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜತೆಗೆ ಕಟ್ಟಡ ಕಾರ್ಮಿಕರ ಸೆಸ್ನಿಂದ ಟೈಲರ್ಗಳು, ನೇಕಾರರಂತಹ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಇ-ಶ್ರಮ್ ಪೋರ್ಟಲ್ ಮೂಲಕ 7.28 ಲಕ್ಷ ಟೈಲರ್ ಗಳು ಅಸಂಘಟಿತ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ನೇಕಾರರಿಗೆ ನಮ್ಮ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಸೆಸ್ ಹಣ ಬಳಸಿ ಕಾರ್ಯಕ್ರಮ ರೂಪಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.