ಬೆಂಗಳೂರು/ ಬೆಳಗಾವಿ:- ಸಾರಿಗೆ ನೌಕರರಿಗೆ ಸಕಾಲದಲ್ಲಿ ವೇತನ ನೀಡಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನಳೀನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಎಸ್ಆರ್ಟಿಸಿಯಲ್ಲಿ ಪ್ರತಿ ತಿಂಗಳು 1ನೇ ತಾರೀಖು, ಬಿಎಂಟಿಸಿಯಲ್ಲಿ 5ನೇ ತಾರೀಖು ಹಾಗೂ ವಾಯುವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ತಿಂಗಳ 10ರೊಳಗೆ ವೇತನವನ್ನು ಒದಗಿಸುತ್ತಿದ್ದೇವೆ.
ವಿಳಂಬ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ವೇತನವನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಒಟ್ಟು ನಾಲ್ಕು ನಿಗಮಗಳಿಂದ 5 ಸಾವಿರದ 200 ಕೋಟಿ ಸಾಲ ಇದೆ. ಕೇಂದ್ರ ಸರ್ಕಾರ 9 ಸಾವಿರ ಕೋಟಿ ನೀಡದಿದ್ದರೆ ಸಾಲದ ಮೊತ್ತ 15 ಸಾವಿರ ಕೋಟಿಯಾಗುತ್ತಿತ್ತು ಎಂದರು.
ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ 9 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದು, 5 ಸಾವಿರ ಹೊಸದಾಗಿ ಬಸ್ಗಳನ್ನು ಖರೀದಿ ಮಾಡಲು ಮುಂದಾಗಿದ್ದೇವೆ. ಹಿಂದಿನ ಸರ್ಕಾರ ಒಂದೇ ಒಂದು ಬಸ್ನ್ನು ಖರೀದಿ ಮಾಡಿರಲಿಲ್ಲ. 13,088 ನೌಕರರು ಸೇವೆಯಿಂದ ನಿವೃತ್ತರಾದರೂ ಒಬ್ಬ ನೌಕರರನ್ನು ಕೂಡ ನೀವು ಏಕೆ ನೇಮಕ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು.