ಬೆಂಗಳೂರು:- ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳಲ್ಲಿ ಸುಗ್ಗಿ ಸಂಕ್ರಾಂತಿ ವೇಳೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ.
ಆರಂಭದಿಂದಲೂ ಇಂದಿರಾ ಕ್ಯಾಂಟೀನ್ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪ್ಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ.
ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಕೇವಲ ರೈಸ್ ಬಾತ್ ಅಥವಾ ಅನ್ನ, ಸಾಂಬರ್, ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್ ಪದಾರ್ಥದ ಊಟ ಬೇಡ, ಮುದ್ದೆ, ಚಪ್ಪಾತಿ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರ ಮತ್ತು ಬಿಬಿಎಂಪಿ ಗಮನಕ್ಕೆ ಬಂದಿತ್ತು. ಹಾಗಾಗಿ, ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಗ್ರಾಹಕರ ಸಂಖ್ಯೆಯಲ್ಲಿ ಗೋಲ್ ಮಾಲ್ ಮಾಡಲಾಗುತ್ತಿದೆ. ಸುಳ್ಳು ಲೆಕ್ಕ ನೀಡಿ ರಿಯಾಯಿತಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದನ್ನು ಡಿಜಿಟಲಿಕರಣದ ಮೂಲಕ ಪಾರದರ್ಶಕ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.
ನಗರದ ಯಾವುದೇ ಇಂದಿರಾ ಕ್ಯಾಂಟೀನ್ಗೆ ಗ್ರಾಹಕ ತೆರಳಿ ಊಟ ಅಥವಾ ಉಪಹಾರದ ಕೋಪನ್ ಪಡೆದರೆ ಆ ಮಾಹಿತಿ ಕೇಂದ್ರ ಕಚೇರಿಗೆ ತಲುಪುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಸ್ವಚ್ಛತೆ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಪ್ರತ್ಯೇಕವಾಗಿ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.