ಬೆಂಗಳೂರು:- ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಕರ್ನಾಟಕ ವಿಧಾನಪರಿಷತ್ ಸದಸ್ಯ ಟಿಎ ಶರವಣ ಅವರು ಸಂತಾಪ ಸೂಚಿಸಿದ್ದಾರೆ.
ಈ ಸಂಬಂಧ “X” (ಈ ಹಿಂದೆ ಟ್ವಿಟ್ಟರ್) ಮಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ.
ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆ ದುಃಖಕರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ದೊರೆಯಲಿ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಇನ್ನೂ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಲಾವಿದೆ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ನಿನ್ನೆ ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ.
ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.