ಬೆಂಗಳೂರು:- ಕಾಂಗ್ರೆಸ್ ಸರ್ಕಾರದ 6 ತಿಂಗಳ ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆ ಸದ್ದು ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು ಕಾಂಗ್ರೆಸ್ ಸರ್ಕಾರ ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಪೋಲಿಸಪ್ಪ ದರ್ಪದಿಂದ ಪ್ರತಿಭಟನಾಕಾರರ ವಿರುದ್ದ ತೊಡೆ ತಟ್ಟಿದ್ದೆ ಇದಕ್ಕೆ ಸಾಕ್ಷಿ. ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿನಿತ್ಯ ಹೋರಾಟ, ಮುಷ್ಕರ, ಘೇರಾವ್, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದು, ಸರ್ಕಾರದ ದಯನೀಯ ಆಡಳಿತದ ವೈಫಲ್ಯ ಹಾಗೂ ಜನತೆಯಲ್ಲಿ ಸರ್ಕಾರದ ವಿರುದ್ಧ ಮಡುಗಟ್ಟಿರುವ ಆಡಳಿತ ವಿರೋಧಿ ಅಲೆಯ ಸುಸ್ಪಷ್ಟ ನಿದರ್ಶನ’ವೆಂದು ಬಿಜೆಪಿ ಕಿಡಿಕಾರಿದೆ.
ಎಂ.ಕೆ.ಸ್ಟಾಲಿನ್ ನಾಡಿಗೆ ಕಾವೇರಿಯನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟು, ರಾಜ್ಯದ ರೈತರ ಅಧಃಪತನವನ್ನು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೊದಲು ತಟ್ಟಿದ್ದೇ ಕಾವೇರಿ ನೀರು ಹೋರಾಟ ಸಮಿತಿಯ ಪ್ರತಿಭಟನೆ, ಬೆಂಗಳೂರು ಬಂದ್. ಆದರೆ ವೋಟಿಗಾಗಿ ಮೂರನ್ನೂ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಮೇಲಿಂದ ಮೇಲೆ ಮಾಡಿದ್ದು ಬರೀ ಅನ್ಯಾಯ ಮಾತ್ರ. ಇನ್ನು ರಾಜ್ಯದ ಕೃಷಿ ಸಚಿವ ಎನಿಸಿಕೊಂಡ ಮಹಾನುಭಾವ ಎನ್.ಚೆಲುವರಾಯಸ್ವಾಮಿಯವರು ಮಾತ್ರ ರಾಜ್ಯದ ರೈತರಿಗೆ ಬೆಳೆಗಳನ್ನೇ ಬೆಳೆಯಬೇಡಿ ಎಂದು ಆದೇಶಿಸುವಷ್ಟು ಸ್ಟಾಲಿನ್ ನಾಡಿನ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.