ಚಂಡೀಗಢ: ಪ್ರೀತಿಗೆ ಗಡಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಾಯ್ನಾಡು ತೊರೆದು ಪ್ರೇಮಿಯನ್ನು ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈಚೆಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್ ಸುದ್ದಿಯಾಗಿದ್ದರು. ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ ಸೇರಿದಳು. ಅದೇ ಮಾದರಿಯಲ್ಲಿ ಮತ್ತೊಂದು ಸುದ್ದಿ ಈಗ ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಬಂದು ಪ್ರಿಯಕರನ ಸೇರಿದ್ದಾರೆ. ಕರಾಚಿ ನಿವಾಸಿ ಜವೇರಿಯಾ ಖಾನುಮ್ ಅಮೃತಸರ ಜಿಲ್ಲೆಯ ಅಟ್ಟಾರಿಯಿಂದ ಭಾರತಕ್ಕೆ ಬಂದಿದ್ದಾರೆ. ಆಕೆ ನಿಶ್ಚಿತ ವರ ಸಮೀರ್ ಖಾನ್ನನ್ನು ಸೇರಿದ್ದಾಳೆ. ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಬಂದಿದ್ದು, ಕೋಲ್ಕತ್ತಾ ನಿವಾಸಿ ಸಮೀರ್ನನ್ನು ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ.
ಖಾನುಮ್ಗೆ 45 ದಿನಗಳ ವೀಸಾವನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕವು ಭಾರತಕ್ಕೆ ಬರುವ ಆಕೆಯ ಯೋಜನೆಗೆ ಐದು ವರ್ಷಗಳ ಕಾಲ ಅಡ್ಡಗಾಲಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗುತ್ತೇವೆ ಎಂದು ಮಾಧ್ಯಮಗಳಿಗೆ ಜೋಡಿ ಪ್ರತಿಕ್ರಿಯಿಸಿದೆ.
ನನಗೆ 45 ದಿನಗಳ ವೀಸಾ ನೀಡಲಾಗಿದೆ. ನಾನು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆಗಮನದ ನಂತರ ನಾನು ಇಲ್ಲಿ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಐದು ವರ್ಷದ ನಂತರ ನನಗೆ ವೀಸಾ ಸಿಕ್ಕಿದೆ. ಇದನ್ನು ನಂಬಲಾಗುತ್ತಿಲ್ಲ ಎಂದು ಖಾನುಮ್ ತಿಳಿಸಿದ್ದಾರೆ.