ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸ್ವಾಗತಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನಲ್ಲಿ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ, ಅನ್ಯಾಯ, ಅನಕೂಲವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು.
ಐದು ಜನ ನ್ಯಾಯಾಧೀಶರು ಸುಪ್ರೀಂಕೋರ್ಟ್ನಲ್ಲಿ ತೀರ್ಪು ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ ಒಂದು ಕಡೆ, ಇನ್ನೊಂದು ಕಡೆ ಎನ್ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾ ಪರ ತೀರ್ಪು ಕೊಡುತ್ತಾರೋ, ಎನ್ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡ್ತಾರೋ ಕಾದುನೋಡಬೇಕು ಎಂದು ಹೇಳಿದರು.