ಬೆಂಗಳೂರು:- ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ.
ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರವೇ ನಾಗರೀಕರ ಮೊದಲ ಶತ್ರು ಎಂಬುದಾಗಿ ಭಾಸವಾಗುತ್ತದೆ ಎಂದು ತಿಳಿಸಿದೆ.
ಗುತ್ತಿದಾರರಿಗೆ ಹಣ ಪಾವತಿಸಲು ಫೆಬ್ರವರಿಯವರೆಗೆ ಕಾವಲಾವಕಾಶ ನೀಡಬೇಕು ಎಂಬ ಸರ್ಕಾರಿ ವಕೀಲರ ಮನವಿಯನ್ನು ಆಕ್ಷೇಪಿಸಿದ ವಿಭಾಗೀಯ ಪೀಠ, ನಿಮ್ಮ ನಡೆಯಿಂದ ಕೆಲಸ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸುತ್ತಿದ್ದೀರಿ. ನಿಮ್ಮ ನೀತಿಯಿಂದ ಟೆಂಡರ್ ಮೊತ್ತ ಹಲವು ಪಟ್ಟು ಹೆಚ್ಚಾಗಬಹುದು. ಸರ್ಕಾರಕ್ಕೆ ಇಂತಹ ಸಲಹೆ ನೀಡುತ್ತಿರುವರಾರು ? ನಾವು ಕಾನೂನು ಪದವಿ ಓದುತ್ತಿದ್ದಾಗ ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಈ ಮಾತು ಸತ್ಯ ಎಂಬ ಭಾವನೆ ಮೂಡುತ್ತಿದೆ ಎಂದು ಪೀಠ ತಿಳಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಕಂತಿನಲ್ಲಿ ಬಿಲ್ ಪಾವತಿಸಲಾಗುತ್ತಿದೆ. ಫೆಬ್ರವರಿ ವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಜತೆಗೆ ಗುತ್ತಿಗೆ ಕಾಮಗಾರಿಗಳ ಅಕ್ರಮ ಕುರಿತಂತೆ ತನಿಖೆ ನಡೆಸಲು ಸರ್ಕಾರ ಎಸ್ಐಟಿ ಮತ್ತು ಏಕವ್ಯಕ್ತಿ ಆಯೋಗ ರಚನೆ ಮಾಡಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಆ ಅರ್ಜಿಯು ಹೈಕೋರ್ಟ್ ಏಕ ಸದಸ್ಯ ಪೀಠದ ಮುಂದಿದೆ. ಈಗಾಗಲೇ ಎಸ್ಐಟಿ ತನಿಖೆಗೆ ಏಕ ಸದಸ್ಯ ನ್ಯಾಯಪೀಠ ತಡೆ ನೀಡಿದೆ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ವಿಭಾಗೀಯ ಪೀಠ, ಅರ್ಜಿಯ ಸಂಬಂಧ ಯಾವುದೇ ಮುಂದಿನ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆಯನ್ನು 2024ರ ಫೆ.13ಕ್ಕೆ ಮುಂದೂಡಿದೆ.