ಲಂಡನ್: ಬ್ರಿಟನ್ ದೇಶದ ಬಾರ್ಕ್ಲೇಸ್ ಬ್ಯಾಂಕ್ ಹಣಕಾಸು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಅದಕ್ಕಾಗಿ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಯ್ಟರ್ಸ್ ವರದಿ ಪ್ರಕಾರ 1 ಬಿಲಿಯನ್ ಪೌಂಡ್ಗಳಷ್ಟು (10,400 ಕೋಟಿ ರೂ) ವೆಚ್ಚಕಡಿತಕ್ಕೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿರೀಕ್ಷಿಸಿದ ರೀತಿಯಲ್ಲಿ ವೆಚ್ಚ ಕಡಿತದ ಯೋಜನೆ ಪೂರ್ಣವಾಗಿ ಜಾರಿಗೆ ತಂದರೆ 1,500ರಿಂದ 2,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ.
ಬಾರ್ಕ್ಲೇಸ್ ಬ್ಯಾಂಕ್ನ ಬ್ಯಾಕ್ ಅಫೀಸ್ ಕೆಲಸಗಳಲ್ಲಿ ಹೆಚ್ಚು ಕತ್ತರಿ ಬೀಳಬಹುದು ಎಂದು ತನ್ನ ಸುದ್ದಿಮೂಲವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಿಎಕ್ಸ್ ಎಂದು ಕರೆಯಲಾಗುವ ಬಾರ್ಕ್ಲೇಸ್ ಎಕ್ಸಿಕ್ಯೂಶನ್ ಸರ್ವಿಸಸ್ ವಿಭಾಗದಲ್ಲಿ ಉದ್ಯೋಗನಷ್ಟ ಕೇಂದ್ರೀಕೃತವಾಗಿರಲಿದೆ. ಬ್ಯಾಂಕ್ನ ಕಾಸ್ಟ್ ಕಟ್ಟಿಂಗ್ ಯೋಜನೆಯಲ್ಲಿ ಇದೂ ಒಂದು ಪ್ರಮುಖ ಭಾಗವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕಾಸ್ಟ್ ಕಟ್ಟಿಂಗ್ ಆಗಲೀ ಅಥವಾ ಲೇ ಆಫ್ ಆಗಲೀ ಒಮ್ಮೆಗೇ ಜಾರಿಯಾಗುವುದಿಲ್ಲ. ಹಲವು ವರ್ಷಗಳ ಕಾಲಾವಧಿಯಲ್ಲಿ ಹಂತ ಹಂತವಾಗಿ ಇದು ಅನುಷ್ಠಾನಕ್ಕೆ ಬರುತ್ತದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.