ಜೋಹಾನ್ಸ್ಬರ್ಗ್: ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಶತಕ ಮತ್ತು ಕುಲ್ದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು 106 ರನ್ಗಳ ಅಂತರದಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಡ್ರಾ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 13.5 ಓವರ್ಗಳಲ್ಲಿ 95 ರನ್ಗಳಿಗೆ ಆಲೌಟ್ ಆಯ್ತು.
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಆಫ್ರಿಕಾಗೆ ಡೇವಿಡ್ ಮಿಲ್ಲರ್ ಸ್ವಲ್ಪ ಶಕ್ತಿ ತುಂಬಿದರು. ಆದರೆ ಕುಲ್ದೀಪ್ ಯಾದವ್ ದಾಳಿಗೆ ಇಳಿಯುತ್ತಿದ್ದಂತೆ ವಿಕೆಟ್ ಪತನಗೊಳ್ಳಲು ಆಂಭವಾಯಿತು.
4 ವಿಕೆಟ್ ನಷ್ಟಕ್ಕೆ 75 ರನ್ಗಳಿಸಿದ ದಕ್ಷಿಣ ಆಫ್ರಿಕಾ ನಂತರ 20 ರನ್ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಡೇವಿಡ್ ಮಿಲ್ಲರ್ 35 ರನ್ ಹೊಡೆದರೆ ನಾಯಕ ಮ್ಯಾಕ್ರಾಮ್ 25 ರನ್ ಹೊಡೆದು ಔಟಾದರು.
2.5 ಓವರ್ ಎಸೆದು 17 ರನ್ ನೀಡಿ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು. ಮುಕೇಶ್ ಕುಮಾರ್ ಮತ್ತು ಆರ್ಶ್ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
ಶತಕ ಸಿಡಿಸಿ ಪಾರು ಮಾಡಿದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮೊದಲ ಪಂದ್ಯ ಮಳೆಗೆ ಅಹುತಿಯಾಗಿದ್ದರೆ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ 5 ವಿಕೆಟ್ಗಳ ಜಯ ಸಾಧಿಸಿತ್ತು. ಡಿ.17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.