ಬೆಂಗಳೂರು: ಹುಟ್ಟಿದಾಗಿಂದಲೂ ಕಾಡುತ್ತಿರುವ ಕಿಡ್ನಿ ರೋಗದ ಸಮಸ್ಯೆ ಬಗ್ಗೆ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಇದೀಗ ಹೇಳಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಲುವಾಗಿ ಟ್ರೇಡಿಂಗ್ ವಿಂಡೋ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗ್ರೀನ್ ಸೇರ್ಪಡೆಯಾಗಿದ್ದರು. ಮುಂಬೈ ಇಂಡಿಯನ್ಸ್ ತಂಡಕ್ಕೆ ಬರೋಬ್ಬರಿ 17.5 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಆರ್ಸಿಬಿ ತಂಡ ಯುವ ಆಲ್ರೌಂಡರ್ನ ಸೇವೆಯನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ಇದೇ ಮೊದಲ ಬಾರಿ ಸಂದರ್ಶನ ನೀಡಿರುವ ಗ್ರೀನ್, ತಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
ಸೌಮ್ಯ ಸ್ವಭಾವದ ಆಟಗಾರ 24 ವರ್ಷದ ಕ್ಯಾಮೆರಾನ್ ಗ್ರೀನ್ ಯಾರೊಂದಿಗೂ ಹೆಚ್ಚು ಬೆರೆಯುವವರಲ್ಲ. ತಮ್ಮ ಈ ಸ್ವಭಾವಕ್ಕೆ ತಾವು ಎದುರಿಸಿರುವ ಆರೋಗ್ಯ ಸಮಸ್ಯೆಯೂ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕಂದಿನಲ್ಲಿ ಹೆಚ್ಚು ವರ್ಷ ಬದುಕುಳಿಯುವ ಸಾಧ್ಯತೆ ಇರಲಿಲ್ಲ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
“ಆ ಸಮಯದಲ್ಲಿ ಏನು ಮಾಡಬೇಕು ಎಂಬುದೇ ಗೊತ್ತಾಗಿರಲಿಲ್ಲ. ಏಕೆಂದರೆ ಗ್ರೀನ್ ಬದುಕುಳಿಯುವ ಸಾಧ್ಯತೆ ಬಹಳಾ ಕಡಿಮೆ ಇತ್ತು. ವೈದ್ಯರು ಅಂದು ಹೇಳಿದ್ದಂತೆ ಗ್ರೀನ್ 12 ವರ್ಷಗಳಿಗಿಂತ ಹೆಚ್ಚು ಸಮಯ ಬದುಕುವ ಸಾಧ್ಯತೆ ಇರಲಿಲ್ಲ,” ಎಂದು ಅವರ ತಂದೆ ಗ್ಯಾರಿ ಗ್ರೀನ್ ಸಂದರ್ಶನದ ವೇಳೆ ಹೇಳಿದ್ದಾರೆ.
ಮೂತ್ರಪಿಂಡದ ರೋಗ (ಕ್ರಾನಿಕ್ ಕಿಡ್ನಿ ಡಿಸೀಸ್) ಇರುವುದು ಅಲ್ಟ್ರಾಸೌಂಡ್ ಪೊರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಸಮಸ್ಯೆ ಇದ್ದವರಲ್ಲಿ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಗ್ರೀನ್ ಅವರ ತಾಯಿ ಬೀ ಟ್ರೇಸಿ 19 ವಾರಗಳ ಗರ್ಭಾವಸ್ತೆಯಲ್ಲಿ ಇದ್ದಂತಹ ಸಮಯದಲ್ಲಿ ನಡೆಸಲಾಗಿದ್ದ ಅಲ್ಟ್ರಾಸೌಂಡ್ ಸ್ಕ್ಯಾನ್ ವೇಳೆ ಈ ಸಮಸ್ಯೆ ಬಗ್ಗೆ ತಿಳಿದುಬಂದಿತ್ತು. ಇಂತಹ ಆರೋಗ್ಯದ ಸಮಸ್ಯೆ ವಿರುದ್ಧ ಹೋರಾಡಿ ಇಂದು ಕ್ಯಾಮೆರಾನ್ ಗ್ರೀನ್ ಅತ್ಯಂತ ಯಶಸ್ವಿ ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಂಡಿದ್ದಾರೆ.
“ಕ್ರಾನಿಕ್ ಕಿಡ್ನಿ ಡಿಸೀಸ್ ಇರುವ ವ್ಯಕ್ತಿಯ ಮೂತ್ರಪಿಂಡಗಳು ವರ್ಷಗಳು ಕಳೆದಂತೆ ತನ್ನ ಕೆಲಸ ಕಾರ್ಯಗಳನ್ನು ಕಡಿಮೆ ಮಾಡುತ್ತಾ ಬರುತ್ತವೆ. ಇದರಿಂದ ನಾನಾ ತರದ ಆರೋಗ್ಯ ಸಮ್ಯೆಗಳು ಎದುರಾಗುತ್ತವೆ. ಸಾಮಾನ್ಯ ಮೂತ್ರಪಿಂಡಗಳಂತೆ ಈ ಆರೊಗ್ಯ ಸಮಸ್ಯೆ ಇರುವ ವ್ಯಕ್ತಿಯ ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸಲು ವಿಫಲವಾಗುತ್ತವೆ. ಅದೃಷ್ಟವಶಾತ್ ನನಗೆ ಅಷ್ಟು ಹೇಳಿಕೊಳ್ಳುವಂತಹ ಸಮಸ್ಯೆ ಈವರೆಗೆ ಆಗಿಲ್ಲ. ಉಳಿದವರಿಗೆ ಹೋಲಿಸಿದರೆ ನನ್ನ ಸಮಸ್ಯೆಯ ತೀವ್ರತೆ ಬಹಳಾ ಕಡಿಮೆ ಇದೆ,” ಎಂದು ಕ್ಯಾಮೆರಾನ್ ಗ್ರೀನ್ ಹೇಳಿಕೊಂಡಿದ್ದಾರೆ.