ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಹಾಗೂ ಪುಣ್ಯಭೂಮಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಗೊಂದಲಗಳು ಏರ್ಪಟ್ಟಿವೆ. ಈ ಕುರಿತು ನಟ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ತಮ್ಮ ಅನಿಸಿಕೆ ಏನು ಎಂಬುದನ್ನು ಹಂಚಿಕೊಂಡಿದ್ದಾರೆ.
ಇಂದು ವಿಷ್ಣುವರ್ಧನ್ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಸುದೀಪ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ‘ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು-ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ’ ಎಂದು ಕಿಚ್ಚ ತಿಳಿಸಿದ್ದಾರೆ.