ಬೆಂಗಳೂರು:- ಆಸ್ತಿ ತೆರಿಗೆ ಪಾವತಿ ಮಾಡದ 836 ವಾಣಿಜ್ಯ ಕಟ್ಟಡಗಳಿಗೆ ಬಿಬಿಎಂಪಿ ಬೀಗ ಜಡಿದೆ. ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದ್ದು, ಪೂರ್ವ ವಲಯದಲ್ಲಿ ಅತಿ ಕಡಿಮೆ ಸಂಖ್ಯೆ ಇದೆ. ವಾಣಿಜ್ಯ ಕಟ್ಟಡಗಳು ಹೆಚ್ಚಿನ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಡಿಮ್ಯಾಂಡ್ ನೋಟಿಸ್ ನೀಡಿದ 30 ದಿನಗಳ ನಂತರವೂ ಪಾವತಿಸದಿರುವುದರಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ಸಂಗ್ರಹದಲ್ಲಿ ಶೇ 10ರಷ್ಟು ಹೆಚ್ಚಳವಾಗಿದ್ದು, ನ.1ರಿಂದ 1.74 ಲಕ್ಷ ಆಸ್ತಿಗಳ ತೆರಿಗೆಯನ್ನು ಪುನರ್ವಿಮರ್ಶಿಸಲಾಗಿದೆ. ಈ ಪುನರ್ವಿಮರ್ಶೆಯಿಂದಲೇ ಸುಮಾರು ₹400 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ.
ಆಸ್ತಿ ವಿಸ್ತೀರ್ಣದ ತಪ್ಪು ಮಾಹಿತಿ, ವಲಯ ಬದಲು ಇತ್ಯಾದಿ ಲೋಪವಿರುವ ಆಸ್ತಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ನ.1ರಿಂದ 12 ಸಾವಿರ ಆಸ್ತಿಗಳಿಗೆ ನೋಟಿಸ್ ನೀಡಿ, 23 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ. 233 ‘ಎ’ ಖಾತಾ ಹಾಗೂ 483 ‘ಬಿ’ ಖಾತಾ ಆಸ್ತಿಗಳು ಹೊಸದಾಗಿ ಆಸ್ತಿ ತೆರಿಗೆ ವ್ಯಾಪ್ತಿ ಬಂದಿವೆ.
ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಸತಿ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ಇದ್ದರೂ ಶೋಕಾಸ್ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಚರಾಸ್ತಿ ಹಾಗೂ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆಯೂ ಇದೆ. ಈ ಆರ್ಥಿಕ ವರ್ಷದಲ್ಲಿ ಗುರಿ ಹೊಂದಿರುವ ಆಸ್ತಿ ತೆರಿಗೆ ಸಂಗ್ರಹದ ಜೊತೆಗೆ, ಪುನರ್ ವಿಮರ್ಶೆ ಪೂರ್ಣಗೊಳಿಸಿ ಹೆಚ್ಚಿನ ತೆರಿಗೆ ಸಂಗ್ರಹಿಸಲು ಯೋಜಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಕಟ್ಟಡಗಳಿಂದಲೂ ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಇದನ್ನು ಪರಿಶೀಲಿಸಲಾಗುತ್ತಿದ್ದು, ಆ ತೆರಿಗೆಯನ್ನೂ ಸಂಗ್ರಹಿಸಲಾಗುತ್ತದೆ’ ಎಂದರು.