ಬೆಂಗಳೂರು: ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸಿದ್ದರೂ ಬರ ಪರಿಹಾರ ನೀಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರೈತರ ಸಾಲ ಮನ್ನಾ ಮಾಡಿ ಎಂದರೆ ಸದನದಲ್ಲಿ ಅಸಡ್ಡೆ ಉತ್ತರ ನೀಡಿದ್ದ ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಕಾಣಿಸುತ್ತಿಲ್ಲವೇ? ಬೆಳೆ ಹಾನಿ, ಸಾಲಬಾಧೆ ಕಾರಣಗಳಿಂದಾಗಿ ಕಳೆದ 8 ತಿಂಗಳಲ್ಲಿ 456 ರೈತರು ನೇಣಿಗೆ ಶರಣಾಗಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ರೈತರ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.
ಕಾಂಗ್ರೆಸ್ ನ ಮರುಳುಗೊಳಿಸುವ ಆಶ್ವಾಸನೆಗಳನ್ನು ನಂಬಿ ಮತ ನೀಡಿದ ಆ ಭಾಗದ ಮುಗ್ಧ ಅನ್ನದಾತರಿಗೆ ಆತ್ಮಹತ್ಯೆಯ ದುರ್ಭಾಗ್ಯ ಕರುಣಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಿದೆ. ಈಗಲಾದರೂ ಸರ್ಕಾರ ಸಂಕಷ್ಟದಿಂದ ನೊಂದಿರುವ ರೈತರಿಗೆ ನ್ಯಾಯ ಸಮ್ಮತ ಬರಪರಿಹಾರ ನೀಡಲಿ, ಇಲ್ಲವಾದರೆ ರೈತ ಆಕ್ರಂದನದ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.