ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಭಾನುವಾರ ಮದುವೆಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಂಕಿತಾ ಕುಟುಂಬಸ್ಥರು ಇಂದು ಯುವಕನ ತಂದೆ-ತಾಯಿ ಮನೆ ಮೇಲೆ ದಾಳಿ ನಡೆಸಿ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ತಂದೆ ಗಂಗರಾಜು ಮೇಲೆ ನಡುರಸ್ತೆಯಲ್ಲೇ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಮಧ್ಯಾಹ್ನದ ವೇಳೆಗೆ 20 ಮಂದಿ ಅಂಕಿತಾ ಪೋಷಕರ ಕಡೆಯವರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ವೆಂಕಟಲಕ್ಷ್ಮಮ್ಮ ಹಾಗೂ ಗಂಗರಾಜುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಂಬುಲೆನ್ಸ್ ಸಹ ಗ್ರಾಮದೊಳಗೆ ಬರಲು ಬಿಡದೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಬಂದ ನಂತರ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ-ಯುವತಿ ಪರಾರಿಯಾಗಲು ಯುವಕನ ಪೋಷಕರು ಸಹ ಕಾರಣ ಎಂದು ಈ ಕೃತ್ಯ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.