2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರ್ರನ್ (Sam Curran) 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಇತಿಹಾಸವಾಗಿತ್ತು. ಆದ್ರೆ ಈ ಬಾರಿ ಏಕದಿನ ವಿಶ್ವಕಪ್ (ODI World Cup) ವಿಜೇತ ತಂಡದ ಸಾರಥ್ಯ ವಹಿಸಿದ್ದ ಪ್ಯಾಟ್ ಕಮ್ಮಿನ್ಸ್ ದುಬಾರಿ ಮೊತ್ತಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ ಬಿಡ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಜಿದ್ದಾ-ಜಿದ್ದಿ ನಡೆದಿತ್ತು. ತನ್ನ ಪರ್ಸ್ನಲ್ಲಿ 23.25 ಕೋಟಿ ರೂ.ಗಳನ್ನಷ್ಟೇ ಉಳಿಸಿಕೊಂಡಿದ್ದ ಆರ್ಸಿಬಿ 20.25 ಕೋಟಿ ರೂ.ವರೆಗೂ ಬಿಡ್ ಮಾಡಿತ್ತು. ಅಂತಿಮವಾಗಿ ಹೈದರಾಬಾದ್ (Sunrisers Hyderabad) ತಂಡ 20.50 ಕೋಟಿ ರೂ.ಗೆ ಬಿಡ್ ಮಾಡಿ ಪ್ಯಾಟ್ಕಮ್ಮಿನ್ಸ್ ಅವರನ್ನ ತನ್ನತ್ತ ಸೆಳೆದುಕೊಂಡಿತು.
ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿದ್ದ ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಗೆಲ್ಲಿಸುವಲ್ಲಿ ಯಶಸ್ವಿಯಾದರು. ಆಸೀಸ್ ತಂಡ 6ನೇ ಬಾರಿಗೆ ಟ್ರೋಫಿಗೆದ್ದ ಸಾಧನೆ ಮಾಡಲು ಕಾರಣರಾದರು. ಇದಕ್ಕೂ ಮುನ್ನ ಕಮ್ಮಿನ್ಸ್ ನಾಯಕತ್ವದಲ್ಲೇ ಆಸೀಸ್ ತಂಡ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಪಟ್ಟವನ್ನೂ ಗೆದ್ದುಕೊಂಡಿತ್ತು. ಈ ಮೂಲಕ ಮೂರು ಮಾದರಿಯ ಕ್ರಿಕೆಟ್ನಲ್ಲಿ ಚಾಂಪಿಯನ್ ಆದ ಮೊದಲ ತಂಡ ಆಸೀಸ್ ಎಂಬ ಹೆಗ್ಗಳಿಗೆ ಪಾತ್ರವಾಯಿತು. ಈ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಅಧಿಕ ಮೊತ್ತಕ್ಕೆ ಬಿಡ್ ಮಾಡಲಾಗಿದೆ